ದುಬೈ: ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 13ನೇ ಆವೃತ್ತಿಗಾಗಿ ಯುಎಇಗೆ ಕಾಲಿಟ್ಟ ಬಳಿಕ ಮೊದಲ 6 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದೆ. ಗುರುವಾರದಿಂದ 3 ವಾರಗಳ ಕಾಲ ತಂಡದ ತರಬೇತಿ ಶಿಬಿರ ನಡೆಯಲಿದೆ. ಆಟಗಾರರು ಇನ್ನು ಜೈವಿಕ-ಸುರಕ್ಷಾ ವಾತಾವರಣದೊಳಗೆ ಕಠಿಣ ಅಭ್ಯಾಸ ನಡೆಸಲಿದ್ದಾರೆ.
‘ಕಳೆದ ಕೆಲ ತಿಂಗಳಿನಿಂದ ಆಟಗಾರರು ವಿಭಿನ್ನವಾದ ವಾತಾವರಣದಲ್ಲಿ ಸಮಯ ಕಳೆದಿದ್ದಾರೆ. ಫಿಟ್ನೆಸ್ ಮತ್ತು ತರಬೇತಿಯ ಭಿನ್ನ ಹಂತಗಳನ್ನು ಕಂಡಿದ್ದಾರೆ. ಹೀಗಾಗಿ ಎಲ್ಲ ಆಟಗಾರರಿಗೆ ಅವರಿಗೆ ತಕ್ಕಂತೆ ಅಭ್ಯಾಸಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು. ಆಟಗಾರರ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ವಿಚಾರಗಳ ಬಗ್ಗೆ ತಂಡದ ತರಬೇತಿ ಸಿಬ್ಬಂದಿ ಗಮನಹರಿಸಲಿದ್ದಾರೆ. ಈ ಮೂಲಕ ಅವರನ್ನು ಅತ್ಯುತ್ತಮ ಕ್ರಿಕೆಟ್ ಆಡಲು ಸಜ್ಜುಗೊಳಿಸಲಾಗುವುದು ಎಂದು ಆರ್‌ಸಿಬಿ ತಂಡದ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ತಿಳಿಸಿದ್ದಾರೆ.
ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಶಿಬಿರ ನಡೆಯಲಿದ್ದು, ಆಟಗಾರರು ಯುಎಇಯ ಬಿಸಿಲಿನ ವಾತಾವರಣದಲ್ಲಿ ಕಠಿಣ ಅಭ್ಯಾಸ ನಡೆಸಿ ಟೂರ್ನಿಗೆ ಸಿದ್ಧರಾಗಲಿದ್ದಾರೆ. ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಲಯ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ಪರ್ಧಾತ್ಮಕವಾದ ತರಬೇತಿ ಇದಾಗಿರಲಿದೆ. ಟೂರ್ನಿಗೆ ಮುನ್ನ ಅಭ್ಯಾಸ ಪಂದ್ಯಗಳನ್ನೂ ಆಡಲಾಗುವುದು ಎಂದು ತಂಡದ ಮುಖ್ಯ ಕೋಚ್ ಸೈಮನ್ ಕಾಟಿಚ್ ತಿಳಿಸಿದ್ದಾರೆ. 6 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ತಂಡದ ಯಾವ ಸದಸ್ಯರಿಗೂ ಹೋಟೆಲ್ ಕೋಣೆಯಿಂದ ಹೊರಬರಲು ಕೂಡ ಅವಕಾಶ ನೀಡಲಾಗಿರಲಿಲ್ಲ.
ಕಿಂಗ್ಸ್, ರಾಯಲ್ಸ್ ಅಭ್ಯಾಸ ಶುರು
ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಬುಧವಾರದಿಂದಲೇ ದುಬೈನಲ್ಲಿ ಅಭ್ಯಾಸ ಆರಂಭಿಸಿವೆ. 6 ದಿನಗಳ ಕ್ವಾರಂಟೈನ್‌ನಲ್ಲಿ ಎಲ್ಲರ ವರದಿಯೂ ನೆಗೆಟಿವ್ ಬಂದ ಬೆನ್ನಲ್ಲೇ ಟೂರ್ನಿಯ ಜೈವಿಕ-ಸುರಕ್ಷಾ ವಾತಾವರಣದೊಳಗೆ ಪ್ರವೇಶ ಪಡೆದಿದ್ದಾರೆ. ಕಿಂಗ್ಸ್ ಇಲೆವೆನ್ ಆಟಗಾರರಾಗಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಮಾಸ್ಕ್ ಧರಿಸಿ ಅಭ್ಯಾಸಕ್ಕೆ ತೆರಳುತ್ತಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.
ಕಳೆದ ಗುರುವಾರವೇ ಅರಬ್ ರಾಷ್ಟ್ರಕ್ಕೆ ಆಗಮಿಸಿದ್ದ ಮತ್ತೊಂದು ತಂಡ ಕೋಲ್ಕತ ನೈಟ್‌ರೈಡರ್ಸ್ ಅಬುಧಾಬಿಯಲ್ಲಿ ಅಭ್ಯಾಸ ಆರಂಭಿಸಿದೆ ಎನ್ನಲಾಗಿದೆ. ಆರ್‌ಸಿಬಿ ಜತೆಗೆ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳ ಕ್ವಾರಂಟೈನ್ ಅವಧಿ ಬುಧವಾರ ಪೂರ್ಣಗೊಂಡಿದ್ದು, ಗುರುವಾರದಿಂದ ಅಭ್ಯಾಸ ಆರಂಭಿಸಲಿವೆ.