ಕ್ರೀಡೆ

ಇಂದಿನಿಂದ ಗಾರ್ಡನ್ ಸಿಟಿಯಲ್ಲಿ ಭಾರತ-ಶ್ರೀಲಂಕಾ ನಡುವೆ ಪಿಂಕ್ ಬಾಲ್ ಟೆಸ್ಟ್

ಬೆಂಗಳೂರು: ಹಚ್ಚ ಹಸಿರಿನಿಂದ ಕೂಡಿರುವ ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣ ಎರಡು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದೆ. ಆತಿಥೇಯ ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ 2ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯ ಶನಿವಾರದಿಂದ ಆರಂಭಗೊಳ್ಳಲಿದೆ. 2 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-0 ಯಿಂದ ಮುನ್ನಡೆ ಸಾಧಿಸಿದ್ದು, ಸರಣಿ ಗೆಲುವಿನ ಉತ್ಸಾಹದಲ್ಲಿದೆ. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವಿನ ನಗೆ ಬೀರಿದ್ದ ರೋಹಿತ್ ಶರ್ಮ ಪಡೆ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಮತ್ತೊಂದೆಡೆ, ಸರಣಿಯಲ್ಲಿ ಸಮಬಲ ಸಾಧಿಸುವ ಯತ್ನದಲ್ಲಿರುವ ಪ್ರವಾಸಿ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ.

* ಸರಣಿ ಜಯದತ್ತ ಭಾರತದ ಚಿತ್ತ

ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿರಾಸೆ ಅನುಭವಿಸಿದ್ದ ಭಾರತ ತಂಡ, ಬಳಿಕ ತವರಿನಲ್ಲಿ ನಡೆದ ಎಲ್ಲ ಸರಣಿಗಳಲ್ಲೂ ಭರ್ಜರಿ ನಿರ್ವಹಣೆ ತೋರುತ್ತಾ ಸಾಗಿದೆ. ಮುಖ್ಯಕೋಚ್ ರಾಹುಲ್ ದ್ರಾವಿಡ್- ನಾಯಕ ರೋಹಿತ್ ಶರ್ಮ ಜೋಡಿ ಮತ್ತೊಂದು ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದು, 2ನೇ ಆವೃತ್ತಿಯ ವಿಶ್ವ ಟೆಸ್ಟ್‌ಚಾಂಪಿಯನ್‌ಷಿಪ್ ದೃಷ್ಟಿಯಿಂದ ಈ ಪಂದ್ಯ ಮಹತ್ವ ಪಡೆದಿದೆ. ರೋಹಿತ್ ಶರ್ಮ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸಿದರೆ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಿಕೆಟ್ ಕೀಪರ್ ರಿಷಭ್ ಪಂತ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದರೆ, ಆಲ್ರೌಂಡರ್ ರವೀಂದ್ರ ಜಡೇಜಾ, ಆರ್.ಅಶ್ವಿನ್ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾದರೆ, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ ಪಿಂಕ್‌ಬಾಲ್‌ನಲ್ಲಿ ಕಮಾಲ್ ಮಾಡಲು ಸಜ್ಜಾಗಿದೆ.

* ವಿರಾಟ್ ಕೊಹ್ಲಿ ಕೇಂದ್ರ ಬಿಂದು

ಉದ್ಯಾನನಗರಿ ಜನತೆಯ  ಫೇವರಿಟ್ ಆಟಗಾರನಾಗಿರುವ ವಿರಾಟ್ ಕೊಹ್ಲಿ ಕಳೆದ 28 ತಿಂಗಳಿಂದ ಶತಕದ ಬರ ಎದುರಿಸುತ್ತಿದ್ದಾರೆ. 2008ರಿಂದಲೂ ಐಪಿಎಲ್‌ನಲ್ಲಿ ಆರ್‌ಸಿಬಿ ಆಟಗಾರನಾಗಿರುವ ವಿರಾಟ್ ಕೊಹ್ಲಿ ಉದ್ಯಾನನಗರಿಯ ನೆಚ್ಚಿನ ಆಟಗಾರನಾಗಿದ್ದಾರೆ. ಕೊಹ್ಲಿ ಪಾಲಿಗೆ ಎರಡನೇ ತವರು ಮೈದಾನದಂತಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶತಕದ ಬರ ನೀಗಿಸಿಕೊಳ್ಳುವ ತವಕದಲ್ಲಿದ್ದಾರೆ. ಕೋಲ್ಕತದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಕಡೇ ಬಾರಿಗೆ ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದರು. ಅಲ್ಲಿಂದ ಇದುವರೆಗೂ ಆಡಿರುವ 28 ಟೆಸ್ಟ್ ಇನಿಂಗ್ಸ್‌ಗಳಲ್ಲಿ 33 ವರ್ಷದ ಕೊಹ್ಲಿ 6 ಬಾರಿ ಅರ್ಧಶತಕ ಸಿಡಿಸಿದರೂ ಮೂರಂಕಿ ಮೊತ್ತ ದಾಟಲು ವಿಫಲರಾಗಿದ್ದಾರೆ. ಇದೇ ಜನವರಿಯಲ್ಲಿ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಸಿಡಿಸಿದ 79 ರನ್ ಗರಿಷ್ಠ ಮೊತ್ತವಾಗಿದೆ. ಕಠಿಣ ಸಮಯ ಎದುರಿಸುತ್ತಿರುವ ಕೊಹ್ಲಿ, ತಮ್ಮ ನೆಚ್ಚಿನ ಮೈದಾನದಲ್ಲಿ ಲಯಕ್ಕೆ ಮರುಳುವ ಕಾತರದಲ್ಲಿದ್ದಾರೆ.

* ತವರಲ್ಲಿ ವರ್ಷದ ಕಡೇ ಪಂದ್ಯ

ಭಾರತ ತಂಡ ತವರಿನಲ್ಲಿ ಪ್ರಸಕ್ತ ವರ್ಷ ಆಡುತ್ತಿರುವ ಕಡೇ ಟೆಸ್ಟ್ ಪಂದ್ಯ ಇದಾಗಿದೆ. ಎರಡನೇ ಆವೃತ್ತಿಯ ಡಬ್ಲ್ಯುಟಿಸಿ  ಫೈನಲ್‌ಗೂ ಮುನ್ನ ಭಾರತಕ್ಕೆ ಈ ಪಂದ್ಯ ಸೇರಿದಂತೆ 8 ಪಂದ್ಯಗಳು ಬಾಕಿ ಉಳಿದಿವೆ. ಇದೇ ವರ್ಷ ಬಾಂಗ್ಲಾದೇಶ ಪ್ರವಾಸದಲ್ಲಿ 2 ಪಂದ್ಯಗಳ ಸರಣಿ, ಇದಕ್ಕೂ ಮೊದಲು 15ನೇ ಐಪಿಎಲ್ ಮುಕ್ತಾಯಗೊಂಡ ಬೆನ್ನಲ್ಲೇ ಇಂಗ್ಲೆಂಡ್ ಎದುರು ಏಕೈಕ ಟೆಸ್ಟ್ ಪಂದ್ಯವಾಡಲಿದೆ. ಕಳೆದ ವರ್ಷ 4 ಪಂದ್ಯಗಳ ಸರಣಿಯಲ್ಲಿ 3 ಪಂದ್ಯಗಳಷ್ಟೇ ನಡೆದಿದ್ದವು. 2023ರಲ್ಲಿ ಆಸ್ಟ್ರೇಲಿಯಾ ಎದುರು 4 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.

* ಪ್ರವಾಸಿ ತಂಡಕ್ಕೆ ಗಾಯದ ಸಮಸ್ಯೆ

ಟಿ20 ಸರಣಿಯಲ್ಲಿ ವೈಟ್‌ವಾಷ್ ಮುಖಭಂಗಕ್ಕೀಡಾಗಿದ್ದ ಪ್ರವಾಸಿ ಶ್ರೀಲಂಕಾ ತಂಡ, ಮೊದಲ ಟೆಸ್ಟ್‌ನಲ್ಲಿ ಕೇವಲ ಮೂರೇ ದಿನಕ್ಕೆ ಶರಣಾಗಿತ್ತು. ವೇಗಿ ಲಹಿರು ಕುಮಾರ ಸ್ನಾಯು ಸೆಳೆತದಿಂದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇವರ ಬದಲಿಗೆ ದುಶ್ಮಾಂತ ಚಮೀರಾ ಕಣಕ್ಕಿಳಿಯಲಿದ್ದಾರೆ. ನಾಯಕ ದಿಮುತ್ ಕರುಣರತ್ನೆಗೆ ಇತರ ಬ್ಯಾಟರ್‌ಗಳಿಂದ ಅಗತ್ಯ ಸಾಥ್ ಬೇಕಿದೆ. ಬೌಲರ್‌ಗಳು ಪ್ರತಿಹೋರಾಟ ತೋರಬೇಕೆಂದರೆ ಬ್ಯಾಟರ್‌ಗಳು ಉತ್ತಮ ನಿರ್ವಹಣೆ ತೋರಬೇಕಿದೆ. ವೇಗಿ ಸುರಂಗ ಲಕ್ಮಲ್ ಪಾಲಿಗೆ ಕಡೇ ಸರಣಿ ಇದಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್