ಪೊಚ್ಫಸ್ಟ್ರೋಮ್: ಏಡೆನ್ ಮಾರ್ಕ್ರಮ್ (102* ರನ್, 74 ಎಸೆತ, 9 ಬೌಂಡರಿ, 4 ಸಿಕ್ಸರ್) ಭರ್ಜರಿ ಶತಕದ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ಮೂರನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 111 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು ಟೆಂಬಾ ಬವುಮಾ 1-2 ರಿಂದ ಜೀವಂತವಿರಿಸಿದೆ.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 6 ವಿಕೆಟ್‌ಗೆ 338 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಆಫ್ರಿಕಾ ಪರ ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿ ಕಾಕ್ (82) ಹಾಗೂ ನಾಯಕ ಟೆಂಬಾ ಬವುಮಾ (57) ಮೊದಲ ವಿಕೆಟ್‌ಗೆ 146 ರನ್‌ಗಳ ಭದ್ರ ಅಡಿಪಾಯ ಒದಗಿಸಿದರು. ಮಾರ್ಕ್ರಮ್ 74 ಎಸೆತದಲ್ಲಿ ಶತಕ ಪೂರೈಸಿದರು. ಪ್ರತಿಯಾಗಿ ಡೇವಿಡ್ ವಾರ್ನರ್ (78 ರನ್, 56 ಎಸೆತ, 10 ಬೌಂಡರಿ, 3 ಸಿಕ್ಸರ್) ಒದಗಿಸಿದ ಉತ್ತಮ ಆರಂಭದ ಹೊರತಾಗಿಯೂ ಆಸೀಸ್, 34.3 ಓವರ್‌ಗಳಲ್ಲಿ 227 ರನ್‌ಗಳಿಗೆ ಸರ್ವಪತನ ಕಂಡಿತು. ಸರಣಿಯ ಮೊದಲೆರಡು ಪಂದ್ಯ ಜಯಿಸಿರುವ ಆಸ್ಟ್ರೇಲಿಯಾ 2-1 ಮುನ್ನಡೆ ಸಾಧಿಸಿದೆ.
ದಕ್ಷಿಣ ಆಫ್ರಿಕಾ: 6 ವಿಕೆಟ್‌ಗೆ 338 (ಡಿ ಕಾಕ್ 82, ಬವುಮಾ 57, ಹೆಂಡ್ರಿಕ್ಸ್ 39, ಮಾರ್ಕ್ರಮ್ 102*, ಮಾರ್ಕೋ ಜಾನ್ಸೆನ್ 32, ಟ್ರಾವಿಸ್ ಹೆಡ್ 39ಕ್ಕೆ2).
ಆಸ್ಟ್ರೇಲಿಯಾ: 34.3 ಓವರ್‌ಗಳಲ್ಲಿ 227 ( ವಾರ್ನರ್ 78, ಹೆಡ್ 38, ಮಿಚೆಲ್ ಮಾರ್ಷ್ 29, ಲಬುಶೇನ್ 15, ಗೆರಾಲ್ಡ್ ಕೊಟ್ಜೆ 50ಕ್ಕೆ4, ಶಮ್ಸಿ 29ಕ್ಕೆ2).