ದಾವಣಗೆರೆ: ಜೀವನದಲ್ಲಿ ಆರೋಗ್ಯ ಮತ್ತು ಸಂತೋಷ ಮುಖ್ಯ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಅವುಗಳನ್ನು ಪಡೆಯಬಹುದು ಎಂದು ಎಸ್ಪಿ ಹನುಮಂತರಾಯ ಹೇಳಿದರು.
ದಾವಣಗೆರೆ ಐಎಂಎ ಟೆನಿಸ್ ಅಸೋಸಿಯೇಷನ್ ವತಿಯಿಂದ ಇಲ್ಲಿನ ಹೈಸ್ಕೂಲ್ ಮೈದಾನದ ಟೆನಿಸ್ ಕೋರ್ಟ್‌ನಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಟೆನಿಸ್ ಟೂರ್ನಿ 2020 ಅನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಿಂದ ಸ್ವಸ್ಥ ಹಾಗೂ ಸುಖಕರ ಸಮಾಜ ನಿರ್ಮಾಣ ಸಾಧ್ಯ. ದಿನದಲ್ಲಿ ಯಾವುದಾದರೂ ಒಂದು ಸಮಯ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು.
ಟೆನಿಸ್ ಆಟಗಾರರ ಇಚ್ಛಾಶಕ್ತಿಯಿಂದ ದಾವಣಗೆರೆ ಟೆನಿಸ್ ಚಟುವಟಿಕೆಯ ಕೇಂದ್ರವಾಗಿದೆ. ಇದು ಒಳ್ಳೆಯ ಬೆಳವಣಿಗೆ. ಟೆನಿಸ್ ಅನ್ನು ನೀವು ಆಡುವುದರ ಜತೆಗೆ ನಿಮ್ಮ ಮನೆಯವರು ಹಾಗೂ ಇತರರನ್ನು ಆಡಿಸಬೇಕು. ದಾವಣಗೆರೆಯಲ್ಲಿ ಮೂರು ಕಡೆ ಟೆನಿಸ್ ಆಟವಾಡಲು ಜಾಗಗಳಿವೆ. ಈ ಕ್ರೀಡೆಯಲ್ಲಿ ಯುವಕರನ್ನು ಪ್ರೋತ್ಸಾಹಿಸಬೇಕು. ನೀವು ಜಾಸ್ತಿ ಆಟವಾಡಿದರೆ ನಮಗೆ ಕೆಲಸ ಕಡಿಮೆಯಾಗುತ್ತದೆ. ಹೆಚ್ಚು ಆಟವಾಡಿ ಸಂತೋಷದಿಂದ ಇರಿ ಎಂದು ತಿಳಿಸಿದರು.
ನಿವೃತ್ತ ಡಿವೈಎಸ್‌ಪಿ ಚಂದ್ರಪ್ಪ ಮಾತನಾಡಿ, ವೈದ್ಯರು ಬಿಡುವಿಲ್ಲದ ವೃತ್ತಿಯಲ್ಲಿಯೂ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೀವನ ಮಾಡಲು ವೃತ್ತಿ ಬೇಕು. ಆದರೆ ಪ್ರವೃತ್ತಿಯಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ. ಬಹಳ ಜನ ವೈದ್ಯರು ಬಿಡುವಿಲ್ಲ ಎಂದು ಹೇಳುತ್ತಾರೆ. ಯಾರು ಬಿಡುವು ಇಲ್ಲ ಎನ್ನುತ್ತಾರೋ ಅವರು ಸೋಮಾರಿಯಾಗುತ್ತಾರೆ ಎಂದು ಹೇಳಿದರು.
ವೃತ್ತಿ ಆನಂದ ಕೊಡುವುದಿಲ್ಲ. ಆದರೆ ಪ್ರವೃತ್ತಿಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ವೃತ್ತಿಯಲ್ಲಿ ನೀವು ಜೀವಿಸಬಹುದು. ಪ್ರವೃತ್ತಿಯಲ್ಲಿ ಜೀವನ ನಡೆಸಬಹುದು. ವೈದ್ಯರು ಔಷಧ ಚೀಟಿ ಬರೆದುಕೊಡುವಾಗ ಕ್ರೀಡೆಯನ್ನು ಆಡಿರಿ ಎಂದು ಸಲಹೆ ನೀಡಿದರೆ ಉತ್ತಮ ಎಂದು ಹೇಳಿದರು.
ಐಎಂಎ ದಾವಣಗೆರೆ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಂ. ಬ್ಯಾಡಗಿ, ರಾಜ್ಯಾಧ್ಯಕ್ಷ ಡಾ.ಮಾಲೇಗೌಡ, ಡಾ.ಕರಜಗಿ, ಡಾ.ನಾಗಪ್ರಕಾಶ್, ಡಾ.ಗಿರೀಶ್, ಡಾ.ಪಿ.ನಾಗರಾಜ್, ಡಾ.ಸುಬ್ಬರಾವ್, ಸೃಷ್ಟಿ ಪಾಲ್ಗೊಂಡಿದ್ದರು. ಟೂರ್ನಿಗೆ 90 ಕ್ರೀಡಾಪಟುಗಳು ಹೆಸರು ನೋಂದಾಯಿಸಿದ್ದರು.