ಬೆಂಗಳೂರು: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮ ದಂಪತಿ ಗುರುವಾರ ವೊದಲ ಮಗುವಿನ ನಿರೀಕ್ಷೆಯ ಸುದ್ದಿ ಪ್ರಕಟಿಸಿದ ಬೆನ್ನಲ್ಲೇ ತಾರಾ ಜೋಡಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. 2021ರ ಜನವರಿಯಲ್ಲಿ ಮೊದಲ ಮಗುವನ್ನು ಸ್ವಾಗತಿಸಲಿದ್ದೇವೆ ಎಂದು ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಇದೀಗ ಆಹಾರ ಪೂರೈಸುವ ಜೊಮ್ಯಾಟೋ ಸಂಸ್ಥೆಯೂ ಕೊಹ್ಲಿ ಜೋಡಿಗೆ ವಿಶಿಷ್ಠ ಶೈಲಿಯಲ್ಲಿ ಅಭಿನಂದಿಸಿ ಟ್ವೀಟ್ ಮಾಡಿದೆ.
ಕೊಹ್ಲಿ-ಅನುಷ್ಕಾ ಜೋಡಿ ನೀಡಿರುವ ಸಿಹಿ ಸುದ್ದಿ ಕುರಿತು ಟ್ವೀಟ್ ಮಾಡಿರುವ ಜೊಮ್ಯಾಟೋ, ನಿಜಕ್ಕೂ ಸಂತೋಷದ ಸುದ್ದಿ..!ಸಿಹಿ ಸೇವಿಸಲು ನಾಚಿಕೆ ಬೇಡ, ವಿರಾಟ್ ನಿಮ್ಮ ಸೇವೆಯಲ್ಲಿ... ಎಂದು ಜೊಮ್ಯಾಟೋ ಬರೆದುಕೊಂಡಿದೆ. ಇದರ ಬೆನ್ನಲ್ಲೇ ನೂರಾರು ಮಂದಿ ಜೊಮ್ಯಾಟೋ ಟ್ವೀಟ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿಹಿ ಪದಗಳ ಸೃಷ್ಟಿಗೆ ನೆಟ್ಟಿಗರು ಫಿದಾ ಅಗಿದ್ದಾರೆ. ಹಲವು ಮಂದಿ ರಿಟ್ವೀಟ್ ಮಾಡಿದ್ದು, ವಿವಿಧ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.