ಹರಾರೆ: ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್ನ ಶ್ರೇಷ್ಠ ತಂಡಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದ ಜಿಂಬಾಬ್ವೆ ತಂಡ ಇಂದು ಹೀನಾಯ ಸ್ಥಿತಿ ತಲುಪಿದೆ. ಸ್ಥಳೀಯ ಕ್ರಿಕೆಟ್ ಆಡಳಿತ ಹಾಗೂ ದೇಶದ ರಾಜತಾಂತ್ರಿಕ ಬಿಕ್ಕಟ್ಟೇ ಜಿಂಬಾಬ್ವೆ ತಂಡದ ಇಂದಿನ ಹೀನಾಯ ಸ್ಥಿತಿಗೆ ಕಾರಣ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಂಬಾಬ್ವೆ ತಂಡ ಸಕ್ರಿಯವಾಗಿದ್ದರೂ ಸೂಕ್ತ ಪ್ರಾಯೋಜಕತ್ವ ಕೊರತೆಯಿಂದ ತತ್ತರಿಸಿದೆ. ಎಷ್ಟೊ ವರ್ಷಗಳಿಂದಲೂ ಪ್ರಾಯೋಜಕರಿಲ್ಲದೇ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯೇ ಸ್ವತಃ ಖರ್ಚಿನಿಂದ ತಂಡವನ್ನು ನಿಭಾಯಿಸುತ್ತಿದೆ. ತಂಡದ ಇಂಥ ದುಸ್ಥಿತಿಯನ್ನು ಕಂಡು ಕಣ್ಣೀರು ಹಾಕಿರುವ ಆಲ್ರೌಂಡರ್ ರ್ಯಾನ್ ಬರ್ಲ್, ಆಟಗಾರರು ಉತ್ತಮ ಶೂಗೂ ಪರಿತಪಿಸುವಂತಾಗಿದೆ ಎಂದಿದ್ದಾರೆ. ಪ್ರತಿ ಸರಣಿಗೆ ಬಳಿಕ ಹಳೇ ಶೂಗಳನ್ನೇ ಅಂಟಿಸಿಕೊಂಡು ಉಪಯೋಗಿಸಲಾಗುತ್ತಿದೆ ಎಂದಿದ್ದಾರೆ.
ಟೆಸ್ಟ್ ಮಾನ್ಯತೆ ಹೊಂದಿದ್ದ ಜಿಂಬಾಬ್ವೆ ತಂಡದೊಂದಿಗೆ 2010ರಲ್ಲಿ ರೀಬಾಕ್ ಕಂಪನಿ 2013ರವರೆಗೂ ಒಪ್ಪಂದ ಮಾಡಿಕೊಂಡಿತು. ಆದರೆ, ಕಾಲಕ್ರಮೇಣ ತಂಡದಲ್ಲಿ ಉಂಟಾದ ಗೊಂದಲದಿಂದಾಗಿ ಒಪ್ಪಂದ ಮುಕ್ತಾಯಗೊಂಡ ಬಳಿಕ ರೀಬಾಕ್ ಕಂಪನಿಯೂ ಕಿಟ್ ಪ್ರಾಯೋಜಕತ್ವದಿಂದ ಹಿಂದೆ ಸರಿಯಿತು. ತಂಡದ ಸಂಕಷ್ಟವನ್ನು ನೋಡಿ ಯಾರಾದರೂ ಪ್ರಾಯೋಜಕತ್ವ ನೀಡುವಂತೆ ಟ್ವಿಟರ್ನಲ್ಲಿ ಆಲ್ರೌಂಡರ್ ರ್ಯಾನ್ ಬರ್ಲ್ ಅಳಲು ತೋಡಿಕೊಂಡಿದ್ದಾರೆ.
1990, 2000 ಅವಧಿಯಲ್ಲಿ ಜಿಂಬಾಬ್ವೆ ತಂಡ ಬಲಿಷ್ಠ ತಂಡಗಳಲ್ಲಿ ಒಂದು ಎನಿಸಿತ್ತು. ಆ್ಯಂಡಿ ಪ್ಲವರ್, ಗ್ರ್ಯಾಂಟ್ ಫ್ಲವರ್, ಹೀತ್ ಸ್ಟ್ರೀಕ್, ಹೆನ್ರಿ ಒಲಂಗಾ, ಅಲಿಸ್ಟರ್ ಕ್ಯಾಂಬ್ಬೆಲ್, ಬಳಿಕ ತತೆಂಡ ತೈಬುರಂಥ ಪ್ರತಿಭಾನ್ವಿತ ಆಟಗಾರರಿದ್ದರು. 2003ರ ಬಳಿಕ ಜಿಂಬಾಬ್ವೆ ಸರ್ವಾಧಿಕಾರಿ ರಾರ್ಬಟ್ ಮುಗಾಬೆ ಮಾಡಿದ ಕೆಲವೊಂದು ನಿಯಮಗಳಿಂದಾಗಿ ಹಲವು ಸ್ಟಾರ್ ಕ್ರಿಕೆಟಿಗರು ಜಿಂಬಾಬ್ವೆಯನ್ನೇ ತೊರೆದರು. ಅಲ್ಲಿಂದ ಜಿಂಬಾಬ್ವೆ ತಂಡದ ಅವನತಿ ಕೂಡ ಆರಂಭಗೊಂಡಿತು..