ಕ್ರೀಡೆ

ಮತ್ತೆ ಚೆಸ್ ಆಟಗಾರನಾದ ಕ್ರಿಕೆಟಿಗ ಚಾಹಲ್: ಚದುರಂಗದಿಂದ ಕ್ರಿಕೆಟ್​ನತ್ತ ಬಂದಿದ್ದ ಸ್ಪಿನ್ನರ್, ಆನ್​ಲೈನ್ ಚೆಸ್ ಟೂನಿಯಲ್ಲಿ ಸ್ಪರ್ಧೆ

ನವದೆಹಲಿ: ಭಾರತ ತಂಡದ ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಾಹಲ್, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗ ಐಪಿಎಲ್ 13ನೇ ಆವೃತ್ತಿಯಲ್ಲಿ ಆರ್​ಸಿಬಿ ತಂಡದ ಪರ ಆಡುತ್ತಿರಬೇಕಾಗಿತ್ತು. ಆದರೆ ಕರೊನಾ ಸೋಂಕಿನ ಹಾವಳಿಯಿಂದಾಗಿ ಐಪಿಎಲ್ ಟೂರ್ನಿಯೇ ನಡೆಯದಿರುವುದ ರಿಂದ ತಮ್ಮ ಮೊದಲ ಆಯ್ಕೆಯ ಕ್ರೀಡೆಗೆ ಮತ್ತೆ ಮರಳಿದ್ದಾರೆ ಅಂದರೆ ಮತ್ತೊಮ್ಮೆ ಚೆಸ್ ಆಟಗಾರರಾಗಿ ಬದಲಾಗಿದ್ದಾರೆ!

ಆನ್​ಲೈನ್ ಮೂಲಕ ಆಯೋಜಿಸಲಾಗಿರುವ 70 ಸಾವಿರ ರೂ. ಬಹುಮಾನ ಮೊತ್ತದ ದೇಸಿ ಬಾಯ್್ಸ ಬ್ಲಿಟ್ಜ್ ಚೆಸ್ ಟೂರ್ನಿಯಲ್ಲಿ ಚಾಹಲ್ ಕಣಕ್ಕಿಳಿದಿದ್ದಾರೆ. ಭಾನುವಾರ ಈ ಟೂರ್ನಿ ಆರಂಭವಾಗಿದ್ದು, ಸದ್ಯ ಚಿನ್ನಸ್ವಾಮಿ ಮೈದಾನಕ್ಕಿಳಿದು ಸ್ಪಿನ್ ಬೌಲಿಂಗ್ ಕೌಶಲವನ್ನು ತೋರುವ ಅವಕಾಶ ಇಲ್ಲದ ಕಾರಣ 29 ವರ್ಷದ ಚಾಹಲ್, 64 ಚೌಕದೊಳಗೆ ತಮ್ಮ ಹಳೆಯ ಪ್ರತಿಭೆಯನ್ನು ಮತ್ತೆ ಪ್ರದರ್ಶಿಸಲಾರಂಭಿಸಿದ್ದಾರೆ. ಚೆಸ್ ಡಾಟ್ ಕಾಮ್ ಮೂಲಕ ಈ ಟೂರ್ನಿಯ ಪಂದ್ಯಗಳು ನಡೆಯುತ್ತಿವೆ. ಬಾಲ್ಯದಲ್ಲಿ ಚದುರಂಗದಾಟದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಹರಿಯಾಣದ ಚಾಹಲ್, 12 ವಯೋಮಿತಿಯ ಚೆಸ್​ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ವಿಶ್ವ ಯೂತ್ ಚೆಸ್ ಚಾಂಪಿಯನ್​ಷಿಪ್​ನಲ್ಲಿ ಭಾರತ ತಂಡವನ್ನೂ ಪ್ರತಿನಿಧಿಸಿದ್ದರು. ವಿಶ್ವ ಚೆಸ್ ಆಡಳಿತ ಸಂಸ್ಥೆ ಫಿಡೆ ನೀಡುವ ರೇಟಿಂಗ್​ನಲ್ಲಿ 1956 ಅಂಕಗಳನ್ನೂ ಪಡೆದಿದ್ದಾರೆ. ಆದರೆ ಬಳಿಕ ಚೆಸ್ ಆಟಗಾರರಾಗಿ ಮುಂದುವರಿಯಲು ಪ್ರಾಯೋಜಕರ ಕೊರತೆ ಎದುರಾದ ಕಾರಣ ಕ್ರಿಕೆಟ್​ನತ್ತ ಗಮನ ಹರಿಸಿದ್ದರು.

ದೇಶೀಯ ಕ್ರಿಕೆಟ್​ನಲ್ಲಿ ಹರಿಯಾಣ ಪರ ಮಿಂಚಿದ ಬಳಿಕ 2014ರ ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಸೇರಿದ್ದರು. 2015-16ರ ಐಪಿಎಲ್​ನಲ್ಲಿ ತೋರಿದ ಉತ್ತಮ ನಿರ್ವಹಣೆಯ ಬಳಿಕ 2016ರಲ್ಲಿ ಭಾರತ ತಂಡಕ್ಕೂ ಆಯ್ಕೆಯಾಗಿದ್ದರು. ಅನಂತರ ಚಾಹಲ್ ತಿರುಗಿ ನೋಡಿದ್ದಿಲ್ಲ. ಭಾರತ ಪರ ಇದುವರೆಗೆ 40 ಏಕದಿನ ಮತ್ತು 37 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 71 ಮತ್ತು 52 ವಿಕೆಟ್ ಕಬಳಿಸಿದ್ದಾರೆ.