ಬೆಂಗಳೂರು: ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರೀಗ ಯುಎಇಯಲ್ಲಿ ಆರ್‌ಸಿಬಿ ತಂಡದ ಪರ ಐಪಿಎಲ್‌ನಲ್ಲಿ ಆಡುವುದರಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಭಾವಿ ಪತ್ನಿ ಹಾಗೂ ಕೋರಿಯೋಗ್ರಾರ್ ಧನಶ್ರೀ ವರ್ಮ ಅವರ ಜನ್ಮದಿನವನ್ನು ಮರೆಯದೆ, ಭಾನುವಾರ ವಿಶೇಷ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
‘ಹ್ಯಾಪಿ ಬರ್ತ್‌ಡೇ ಲವ್! ನಿನ್ನ ಪಾಲಿನ ಈ ವಿಶೇಷ ದಿನ ಪ್ರೀತಿ ಮತ್ತು ಹಾರೈಕೆಗಳಿಂದ ತುಂಬಿರಲಿ. ಈ ದಿನವನ್ನು ಆನಂದಿಸು. ನಿನಗೆ ಯಾವುದು ಖುಷಿ ನೀಡುವುದೋ, ಅದು ನನಗೂ ಖುಷಿ ನೀಡುತ್ತದೆ ಎಂಬುದನ್ನು ನಾನು ಯಾವಾಗಲೂ ನಿನಗೆ ಹೇಳುತ್ತಿರುತ್ತೇನೆ. ಐ ಲವ್ ಯೂ’ ಎಂದು ಚಾಹಲ್ ಇನ್‌ಸ್ಟಾಗ್ರಾಂನಲ್ಲಿ ಧನಶ್ರೀ ಜತೆಗಿರುವ ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಧನಶ್ರೀ, ಥ್ಯಾಂಕ್ ಯೂ ಮತ್ತು ಲವ್ ಯೂ ಎಂದು ಪ್ರತಿಕ್ರಿಯಿಸಿದ್ದಾರೆ.
ಐಪಿಎಲ್‌ಗಾಗಿ ಯುಎಇಗೆ ತೆರಳುವುದಕ್ಕೆ ಮುನ್ನ ಆಗಸ್ಟ್‌ನಲ್ಲಿ ಚಾಹಲ್, ದಂತವೈದ್ಯೆಯೂ ಆಗಿರುವ ಧನಶ್ರೀ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಡ್ಯಾನ್ಸರ್ ಆಗಿ ಈಗಾಗಲೆ ಸಾಕಷ್ಟು ಗಮನ ಸೆಳೆದಿರುವ ಧನಶ್ರೀ, ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್‌ನಲ್ಲಿ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಪ್ರಕಟಿಸಿ ಜನಪ್ರಿಯತೆ ಗಳಿಸಿದ್ದಾರೆ.
ಚಾಹಲ್ ಐಪಿಎಲ್‌ನ ಮೊದಲ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಬಗ್ಗೆ ಧನಶ್ರೀ ಸಂಭ್ರಮ ವ್ಯಕ್ತಪಡಿಸಿದ್ದರು. ನಾವಿಬ್ಬರು ಒಂದಾದ ಬಳಿಕ ಆಡಿದ ಮೊದಲ ಪಂದ್ಯದಲ್ಲೇ ಚಾಹಲ್ ಪಂದ್ಯಶ್ರೇಷ್ಠರಾದರು ಎಂದು ಧನಶ್ರೀ ಇನ್‌ಸ್ಟಾಗ್ರಾಂನಲ್ಲೂ ಸಂಭ್ರಮ ಹಂಚಿಕೊಂಡಿದ್ದರು. ಮುಂದಿನ ವರ್ಷಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಯೋಜನೆಯನ್ನು ಇವರಿಬ್ಬರು ಹೊಂದಿದ್ದಾರೆ.