ಬೆಂಗಳೂರು: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 5 ವಿಕೆಟ್ ಗೊಂಚಲು ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆ ಹೊಂದಿರುವ ಸ್ಪಿನ್ನರ್ ಯಜುವೇಂದ್ರ ಚಾಹಲ್ಗೆ ಗುರುವಾರ 30ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಚಾಹಲ್ಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಈ ನಡುವೆ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ವಿಶೇಷ ರೀತಿಯ ಶುಭಾಶಯದ ಸಂದೇಶ ಎಲ್ಲರ ಗಮನ ಸೆಳೆದಿದೆ. ಹಾಗಾದರೇ ಅವರ ಶುಭಾಶಯದಲ್ಲಿ ಏನಿದೆ ಸ್ಪೆಷಲ್ ಗೊತ್ತೇ?
'ಯುಜಿ ಚಾಹಲ್ ಅಥವಾ ನಾನು ನಿನನ್ನು ಮಿ. ಚುಹಾ (ಇಲಿ) ಎಂದು ಕರೆಯಲೇ. ನೀನು ಸ್ವಲ್ಪ ತೂಕ ಹೆಚ್ಚಿಸಿಕೋ ಎಂದು ವಿಶೇಷವಾಗಿ ಶುಭ ಹಾರೈಸುವೆ. ನಿನ್ನ ತಮಾಷೆಯ ವಿಡಿಯೋ ಮತ್ತು ಕಮೆಂಟ್ಗಳಿಂದ ನಮ್ಮನ್ನು ಮನರಂಜಿಸುತ್ತಿರು. ಮುಂದಿನ ವರ್ಷಗಳಲ್ಲಿ ನಿನಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಹ್ಯಾಪಿ ಬರ್ತ್ಡೇ ಯಜುವೇಂದ್ರ ಚಾಹಲ್' ಎಂದು ಯುವರಾಜ್ ಸಿಂಗ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಚಾಹಲ್ ಜತೆಗಿನ ತಮಾಷೆಯ ಸಮಯದ ಚಿತ್ರವನ್ನು ಪ್ರಕಟಿಸಿದ್ದಾರೆ. ತೆಳ್ಳಗಿನ ದೇಹದ ಚಾಹಲ್ಗೆ ದಪ್ಪಗಾಗುವಂತೆ ಯುವಿ ಶುಭ ಹಾರೈಸಿರುವುದು ಎಲ್ಲರ ಗಮನ ಸೆಳೆದಿದೆ.
ಟೀಮ್ ಇಂಡಿಯಾ ಆಟಗಾರರಿಂದ ಶುಭಾಶಯಗಳ ಸುರಿಮಳೆ
ಲಾಕ್ಡೌನ್ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ತಮಾಷೆಯ ವಿಡಿಯೋ, ಕಮೆಂಟ್ಗಳ ಮೂಲಕ ಗಮನ ಸೆಳೆಯುತ್ತ ಬಂದಿರುವ ಚಾಹಲ್ 30ನೇ ಬರ್ತ್ಡೇಗೆ ಟೀಮ್ ಇಂಡಿಯಾದ ಹಾಲಿ-ಮಾಜಿ ಆಟಗಾರರು ಮತ್ತು ಕೋಚ್ ರವಿಶಾಸ್ತ್ರಿ ಶುಭಾಶಯ ತಿಳಿಸಿದ್ದಾರೆ. ಚಾಹಲ್ ಅವರ ಸ್ಪಿನ್ ಬೌಲಿಂಗ್ ಜತೆಗಾರರಾಗಿರುವ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಮೊದಲಿಗರಾಗಿ ಚಾಹಲ್ಗೆ ಶುಭಾಶಯ ತಿಳಿಸಿದ್ದು, 'ನನಗೆ ಉತ್ತಮ ಸಾಥ್ ನೀಡುತ್ತ ಬಂದಿರುವ ಜತೆಗಾರನಿಗೆ ಜನ್ಮದಿನದ ಶುಭಾಶಯಗಳು. ಮೈದಾನದೊಳಗೆ ಮತ್ತು ಹೊರಗೆ ನನ್ನ ಸಹೋದರನಾಗಿರುವೆ. ಆರೋಗ್ಯ, ಸಂತೋಷ, ಯಶಸ್ಸು ಮತ್ತು ಹೆಚ್ಚಿನ ವಿಕೆಟ್ಗಳು ನಿನ್ನದಾಗಲಿ' ಎಂದು ಟ್ವೀಟಿಸಿದ್ದಾರೆ. ಸುರೇಶ್ ರೈನಾ, ಹರ್ಭಜನ್ ಸಿಂಗ್, ಶ್ರೇಯಸ್ ಅಯ್ಯರ್, ಮೊಹಮದ್ ಶಮಿ ಮುಂತಾದವರು ಚಾಹಲ್ಗೆ ಶುಭಾಶಯ ತಿಳಿಸಿದ್ದಾರೆ. ಬಿಸಿಸಿಐ ಕೂಡ ಚಾಹಲ್ ವಿಶೇಷ ಸಾಧನೆಗಳನ್ನು ಮೆಲುಕುಹಾಕುತ್ತ ಶುಭಾಶಯ ಹೇಳಿದೆ.
ಭಾರತ ಪರ ಇದುವರೆಗೆ 52 ಏಕದಿನ ಪಂದ್ಯಗಳಲ್ಲಿ 91 ಮತ್ತು 42 ಟಿ20 ಪಂದ್ಯಗಳಲ್ಲಿ 55 ವಿಕೆಟ್ ಕಬಳಿಸಿರುವ ಆರ್ಸಿಬಿ ಆಟಗಾರ ಚಾಹಲ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ 6 ವಿಕೆಟ್ ಗೊಂಚಲು ಪಡೆದ ವಿಶ್ವದ 2ನೇ ಬೌಲರ್ ಎನಿಸಿದ್ದಾರೆ. ಚೆಸ್ ಆಟಗಾರರೂ ಆಗಿದ್ದ ಚಾಹಲ್, ವಿಶ್ವ ಯೂತ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.