ಕ್ರೀಡೆ

2011 World Cup: ಯುವರಾಜ್ ಸಿಂಗ್ ಅವರನ್ನು ಆಟಗಾರರ ಪಟ್ಟಿಯಿಂದ ಹೊರಗಿಡುವ ಸಾಧ್ಯತೆಗಳೇ ಹೆಚ್ಚಿದ್ದವು! 14 ವರ್ಷಗಳ ನಂತರ ಬಯಲಾಯ್ತು ಅಸಲಿ ಸಂಗತಿ..

2011 World Cup: 2011ರ ಏಕದಿನ ವಿಶ್ವಕಪ್‌ನ ಸರಣಿ ಶ್ರೇಷ್ಠ ಆಟಗಾರ ಯುವರಾಜ್ ಸಿಂಗ್ ಅವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆಟಗಾರರ ಪಟ್ಟಿಯಿಂದ ಹೊರಗಿಡುವ ಸಾಧ್ಯತೆಗಳೇ ಹೆಚ್ಚಿದ್ದವು ಎನ್ನುವ ಅಚ್ಚರಿಯ ವಿಷಯವನ್ನು ಹದಿನಾಲ್ಕು ವರ್ಷಗಳ ನಂತರ ಭಾರತದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಬಹಿರಂಗಪಡಿಸಿದ್ದಾರೆ.

Rediff.com ಜೊತೆ ಮಾತನಾಡಿರುವ ಕರ್ಸ್ಟನ್ ,2010ರಲ್ಲಿ ಯುವಿ ಪ್ರದರ್ಶನ ಉತ್ತಮವಾಗಿರಲಿಲ್ಲ ಹೀಗಾಗಿ ವಿಶ್ವಕಪ್​​ಗೆ ಅವರನ್ನು ಆಯ್ಕೆ ಮಾಡುವ ವಿಷಯದಲ್ಲಿ ಅನೇಕ ಗೊಂದಲಗಳಿದ್ದವು, ಆದರೆ ತಂಡದ ಸಂಯೋಜನೆ ದೃಷ್ಠಿಯಿಂದ ಇಬ್ಬರು ಆಲ್​​​ರೌಂಡರ್​ ಅವಶ್ಯಕತೆ ಇತ್ತು ಆಗ ನಾನು ಮತ್ತು ಧೋನಿ ಆಯ್ಕೆದಾರರ ಮನವೋಲಿಸುವ ಮೂಲಕ ಸಿಂಗ್​​​ಗೆ ಅವಕಾಶ ನೀಡಲಾಯಿತು ಎಂದರು.

2011 ರ ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮುವ ಮೂಲಕ ಎಲ್ಲರ ನಂಬಿಕೆಯನ್ನು ಉಳಿಸಿಕೊಳ್ಳುವುದರೊಂದಿಗೆ, ಭಾರತ 28 ವರ್ಷಗಳ ನಂತರ ಕಪ್ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದರು ಎಂದು ತಿಳಿಸಿದರು.

ಯುವರಾಜ್ ಅತ್ಯುತ್ತಮ ಪ್ರದರ್ಶನ ನೀಡಲು ಭಾರತ ತಂಡದ ಅಂದಿನ ಮಾನಸಿಕ ಸ್ಥಿತಿ ಮತ್ತು ಕಾರ್ಯತಂತ್ರದ ನಾಯಕತ್ವ ತರಬೇತುದಾರ ಪ್ಯಾಡಿ ಅಪ್ಟನ್ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕರ್ಸ್ಟನ್ ತಿಳಿಸಿದ್ದಾರೆ.

ಯುವಿ ವಿಷಯವಾಗಿ ಪ್ಯಾಡಿ ಅಪ್ಟನ್ ಅವರಿಗೂ ಕೀರ್ತಿ ಸಲ್ಲಲೇಬೇಕು. ಆ ವಿಶ್ವಕಪ್‌ಗೆ ಯುವಿಯನ್ನು ಸಿದ್ಧಪಡಿಸಲು ಪ್ಯಾಡಿ ಸಾಕಷ್ಟು ಶ್ರಮಿಸಿದ್ದಾರೆ.ವಿಶ್ವಕಪ್‌ಗೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುವ ಬಗ್ಗೆ ಯುವಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು" ಎಂದು ಕರ್ಸ್ಟನ್ ಹೇಳಿದರು. (ಏಜೆನ್ಸೀಸ್)