ಕ್ರೀಡೆ

ನಿನ್ನೊಂದಿಗೆ ಸಮಯ ಕಳೆಯಬೇಕು… ಬಾಲಿವುಡ್​​ ನಟಿ ಜತೆಗಿನ ಆಸ್ಟ್ರೇಲಿಯಾ ರಹಸ್ಯ ಬಿಚ್ಚಿಟ್ಟ ಯುವಿ! Yuvraj Singh

ನವದೆಹಲಿ: ಟೀಮ್​​ ಇಂಡಿಯಾದ ಮಾಜಿ ಆಲ್​ರೌಂಡರ್​ ಆಟಗಾರ ಯುವರಾಜ್​ ಸಿಂಗ್ ( Yuvraj Singh )​ 2007/2008ರ ಬಾರ್ಡರ್​-ಗವಾಸ್ಕರ್​ ಸರಣಿ ವೇಳೆ ನಡೆದ ತಮಾಷೆಯ ಘಟನೆಯೊಂದನ್ನು ಇದೀಗ ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದು, ಕ್ರೀಡಾಭಿಮಾನಿಗಳಲ್ಲಿ ಕುತೂಹಲವೊಂದನ್ನು ಹುಟ್ಟುಹಾಕಿದ್ದಾರೆ.

ಇತ್ತೀಚೆಗೆ ಕ್ಲಬ್​ ಪ್ರೈರೀ ಫೈರ್​ ( Club Prairie Fire ) ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ ಯುವರಾಜ್, ನಾನು ಆ ಸಂದರ್ಭದಲ್ಲಿ ಬಾಲಿವುಡ್​ ನಟಿಯೊಂದಿಗೆ ಡೇಟಿಂಗ್​ ಮಾಡುತ್ತಿದ್ದೆ. ಆಕೆ ಕೆಲಸದ ನಿಮಿತ್ತ ಆಸ್ಟ್ರೇಲಿಯಾಗೆ ಬಂದಿದ್ದರು. ನಾನಿಲ್ಲಿ ಆಕೆಯ ಹೆಸರನ್ನು ಹೇಳುವುದಿಲ್ಲ ಎಂದರು.

ಮಾತು ಮುಂದುವರಿಸಿದ ಯುವಿ, ಅಡಿಲೇಡ್​ನಲ್ಲಿ ಶೂಟಿಂಗ್​ ನಡೆಯುತ್ತಿತ್ತು. ನಾನು ಆಸ್ಟ್ರೇಲಿಯ ಪ್ರವಾಸದಲ್ಲಿರುವುದರಿಂದ ಸ್ವಲ್ಪ ಸಮಯದವರೆಗೆ ಭೇಟಿಯಾಗುವುದು ಬೇಡ ಎಂದು ಅವಳಿಗೆ ಹೇಳಿದ್ದೆ. ಆದರೂ ಆಕೆ ಕ್ಯಾನ್‌ಬೆರಾಗೆ ಬಸ್‌ನಲ್ಲಿ ನನ್ನನ್ನು ಹಿಂಬಾಲಿಸಿದಳು. ಈ ವೇಳೆ ಎರಡು ಟೆಸ್ಟ್‌ಗಳಲ್ಲಿ ನಾನು ಹೆಚ್ಚು ರನ್ ಗಳಿಸಲಿಲ್ಲ. ನೀನು ಇಲ್ಲಿ ಏನು ಮಾಡುತ್ತಿದ್ದೀಯಾ ಎಂದು ಕೇಳಿದೆ. ನಾನು ನಿನ್ನೊಂದಿಗೆ ಸಮಯ ಕಳೆಯಲು ಬಯಸುತ್ತೇನೆ ಎಂದಳು ಎಂದು ಯುವರಾಜ್ ನೆನಪಿಸಿಕೊಂಡರು.

ಇದೇ ಸಂದರ್ಭದಲ್ಲಿ ಯುವಿ ತನ್ನ ಸೂಟ್‌ಕೇಸ್ ಅನ್ನು ಆಕೆ ಹೇಗೆ ಪ್ಯಾಕ್ ಮಾಡಿದ್ದಾಳೆಂದು ತಿಳಿಸಿದಾಗ ಇಡೀ ಕತೆಯು ತಮಾಷೆಯ ತಿರುವು ಪಡೆದುಕೊಂಡಿತು. ಬೆಳಗ್ಗೆ ಎದ್ದಾಗ ನನ್ನ ಶೂಗಳು ಎಲ್ಲಿ ಎಂದು ನಾನು ಆಕೆಯನ್ನು ಕೇಳಿದೆ. ನಾನು ಅವುಗಳನ್ನು ಪ್ಯಾಕ್ ಮಾಡಿದ್ದೇನೆ ಎಂದಳು. ಹಾಗಾದರೆ ನಾನು ಬಸ್‌ನಲ್ಲಿ ಈಗ ಹೇಗೆ ಹೋಗಲಿ ಎಂದು ಕೇಳಿದೆ. ಅದಕ್ಕೆ ಆಕೆ ನನ್ನದನ್ನು ಧರಿಸು ಎಂದಳು. ಬಲವಂತವಾಗಿ ಆಕೆಯ ಪಿಂಕ್ ಸ್ಲಿಪ್-ಆನ್‌ಗಳನ್ನು ಧರಿಸಲು ಒತ್ತಾಯಿಸಿದಳು ಎಂದರು.

ಬೇರೆ ದಾರಿಯಿಲ್ಲದೆ ನಾನು ಕೂಡ ಧರಿಸಿದೆ. ಆದರೆ, ಅದನ್ನು ಮರೆಮಾಡಲು ಪ್ರಯತ್ನಿಸಿದಾಗಲೆಲ್ಲ ತಂಡದ ಸದಸ್ಯರು ಚಪ್ಪಾಳೆ ತಟ್ಟಿ ಕೀಟಲೆ ಮಾಡುತ್ತಿದ್ದರು. ನಾನು ಬೇರೆ ಶೂಗಳನ್ನು ಖರೀದಿಸುವವರೆಗೂ ವಿಮಾನ ನಿಲ್ದಾಣಕ್ಕೆ ಗುಲಾಬಿ ಬಣ್ಣದ ಸ್ಲಿಪ್-ಆನ್‌ಗಳನ್ನು ಧರಿಸಬೇಕಾಗಿತ್ತು ಎಂದು ಯುವರಾಜ್ ಬಹಿರಂಗಪಡಿಸಿದರು.

ಯುವರಾಜ್​ ಸಿಂಗ್​ ಎಲ್ಲಿಯೂ ನಟಿಯ ಹೆಸರನ್ನು ಬಹಿರಂಗಪಡಿಸಲಿಲ್ಲ. ಹೀಗಾಗಿ ಆ ಬಾಲಿವುಡ್​ ನಟಿ ಯಾರಿರಬಹುದು ಎಂಬ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ಹೆಚ್ಚಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ಆ ನಟಿ ಯಾರೆಂಬುದು ನಿಮಗೇನಾದರೂ ಗೊತ್ತಿದ್ದರೆ ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)