ಕ್ರೀಡೆ

ಡೆಲ್ಲಿ ಕ್ಯಾಪಿಟಲ್ಸ್​ಗೆ ಯುವರಾಜ್ ಸಿಂಗ್​ ಹೊಸ​ ಕೋಚ್​?

ನವದೆಹಲಿ: ಭಾರತದ ಅವಳಿ ವಿಶ್ವಕಪ್​ ಗೆಲುವಿನ ರೂವಾರಿ ಹಾಗೂ ಮಾಜಿ ಆಲ್ರೌಂಡರ್​ ಯುವರಾಜ್​ ಸಿಂಗ್​, ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮುಖ್ಯ ಕೋಚ್​ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಸದ್ಯ ಯುವರಾಜ್​ ಜತೆಗೆ ಡೆಲ್ಲಿ ಫ್ರಾಂಚೈಸಿ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಂತಿಮ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಟೀಮ್​ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ ಡೆಲ್ಲಿ ತಂಡದ ನಿರ್ದೇಶಕರಾಗಿದ್ದು, ಯುವಿ ಸೇರ್ಪಡೆಗೊಂಡರೆ ಡೆಲ್ಲಿ ತಂಡ ಹೊಸ ಬಲ ಪಡೆದುಕೊಂಡಂತಾಗುತ್ತದೆ.

ಕಳೆದ ಕೆಲ ಆವೃತ್ತಿಗಳಿಂದ ಕೋಚ್​ ಆಗಿದ್ದ ಆಸ್ಟ್ರೆಲಿಯಾದ ರಿಕಿ ಪಾಂಟಿಂಗ್​ರನ್ನು ಡೆಲ್ಲಿ ತಂಡ ಇತ್ತೀಚೆಗೆ ಕೈಬಿಟ್ಟಿದ್ದು, ಹೊಸ ಕೋಚ್​ ಹುಡುಕಾಟದಲ್ಲಿದೆ. ಈ ಮುನ್ನ ಯುವರಾಜ್​ರನ್ನು ಕೋಚ್​ ಆಗಿ ಸೇರ್ಪಡೆಗೊಳಿಸಲು ಗುಜರಾತ್​ ಟೈಟಾನ್ಸ್​ ತಂಡ ಆಸಕ್ತಿ ತೋರಿತ್ತು. ಆದರೆ ಈಗ ಆಶಿಶ್​ ನೆಹ್ರಾ ಅವರನ್ನೇ ಕೋಚ್​ ಆಗಿ ಮುಂದುವರಿಸಲು ಗುಜರಾತ್​ ತಂಡ ಬಯಸಿದೆ ಎನ್ನಲಾಗಿದೆ.

42 ವರ್ಷದ ಯುವರಾಜ್​ಗೆ ಈ ಹಿಂದೆ ಕೋಚ್​ ಆಗಿ ಕಾರ್ಯನಿರ್ವಹಿಸಿದ ಅನುಭವ ಇಲ್ಲ. ಆದರೆ ಶುಭಮಾನ್​ ಗಿಲ್​, ಅಭಿಷೇಕ್​ ಶರ್ಮ ಸಹಿತ ಪಂಜಾಬ್​ ತಂಡದ ಕೆಲ ಪ್ರತಿಭಾವಂತ ಕ್ರಿಕೆಟಿಗರು ಇವರ ಮಾರ್ಗದರ್ಶನದಲ್ಲೇ ಪಳಗಿದ್ದಾರೆ ಎಂಬುದು ಗಮನಾರ್ಹ. ಜತೆಗೆ ಯುವಿ ಭಾರತ ಪರ 40 ಟೆಸ್ಟ್​, 304 ಏಕದಿನ ಮತ್ತು 58 ಟಿ20 ಪಂದ್ಯ ಆಡಿದ ಅನುಭವ ಹೊಂದಿದ್ದಾರೆ.

ಡೆಲ್ಲಿ ತಂಡ 2020ರಲ್ಲಿ ಐಪಿಎಲ್ ಫೈನಲ್​ಗೇರಿ ರನ್ನರ್​ಅಪ್​ ಆಗಿತ್ತು. ಆದರೆ 2022ರಿಂದ ಕಳೆದ 3 ಆವೃತ್ತಿಗಳಲ್ಲಿ ಡೆಲ್ಲಿ ತಂಡ ಪ್ಲೇಆಫ್​ ಹಂತಕ್ಕೇರಲು ವಿಫಲವಾಗಿದೆ.