ನವದೆಹಲಿ: ಭಾರತ ತವರಿನಲ್ಲಿ 12 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲು ಸಜ್ಜಾಗುತ್ತಿದೆ. ಇದೇ ವೇಳೆ 2011ರಲ್ಲಿ ತವರಿನಲ್ಲೇ ಕೊನೆಯದಾಗಿ ವಿಶ್ವಕಪ್ ಗೆದ್ದಿರುವ ಸಾಧನೆಯನ್ನು ಪುನರಾವರ್ತಿಸುವ ನಿರೀಕ್ಷೆಯೂ ಹರಡಿದೆ. ಆದರೆ 2011ರಲ್ಲಿ ಭಾರತ ತಂಡದ ವಿಶ್ವಕಪ್ ಗೆಲುವಿನ ಹೀರೋ ಎನಿಸಿದ್ದ ಯುವರಾಜ್ ಸಿಂಗ್ ಪ್ರಕಾರ, ಈ ಬಾರಿ ರೋಹಿತ್ ಶರ್ಮ ಬಳಗ ವಿಶ್ವಕಪ್ ಗೆಲ್ಲುವುದು ಕಷ್ಟಕರವಾಗಿದೆ. ತಂಡದ ಕೆಲ ಪ್ರಮುಖ ಆಟಗಾರರು ಗಾಯ ಮತ್ತು ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವುದು ಇದಕ್ಕೆ ಕಾರಣ ಎಂದವರು ಅಭಿಪ್ರಾಯಪಟ್ಟಿದ್ದಾರೆ.
'ನಾನು ದೇಶಭಕ್ತಿಯೊಂದಿಗೆ, ಭಾರತ ಈ ಸಲ ವಿಶ್ವಕಪ್ ಗೆಲ್ಲುತ್ತದೆ ಎಂದು ಹೇಳಬಲ್ಲೆ. ಆದರೆ ಸರಿಯಾಗಿ ಗಮನಿಸಿದರೆ, ಗಾಯದ ಸಮಸ್ಯೆಯಿಂದಾಗಿ ಭಾರತ ತಂಡದ ಮಧ್ಯಮ ಕ್ರಮಾಂಕ ಹೆಚ್ಚಿನ ಕಳವಳವನ್ನು ಹೊಂದಿದೆ. ಇದನ್ನು ಬಗೆಹರಿಸದಿದ್ದರೆ ನಾವು ವಿಶ್ವಕಪ್ನಲ್ಲಿ ಪರದಾಡುವುದು ನಿಶ್ಚಿತ. ಅದರಲ್ಲೂ ಪ್ರಮುಖವಾಗಿ ಒತ್ತಡದ ಪಂದ್ಯಗಳಲ್ಲಿ ಕಷ್ಟವಾಗಲಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ತಾಂತ್ರಿಕತೆ ಆರಂಭಿಕರಿಗಿಂತ ಭಿನ್ನವಾಗಿರುತ್ತದೆ. ತಂಡದ ಮಧ್ಯಮ ಕ್ರಮಾಂಕವನ್ನು ಬಲಪಡಿಸುವುದು ಈಗಿನ ಅಗತ್ಯ ಆಗಿದೆ' ಎಂದು ಯುವರಾಜ್ ಸಿಂಗ್ ಯೂಟ್ಯೂಬ್ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
ಆರಂಭಿಕರು ಮತ್ತು 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅವರೇ ಪ್ರತಿ ಪಂದ್ಯದಲ್ಲೂ ಭಾರತ ತಂಡವನ್ನು ಕಾಪಾಡಲು ಸಾಧ್ಯವಿಲ್ಲ. ಆರಂಭಿಕರು ಬೇಗನೆ ಔಟಾದರೆ ಮಧ್ಯಮ ಕ್ರಮಾಂಕಕ್ಕೆ ಇನಿಂಗ್ಸ್ ಕಟ್ಟುವ ಸವಾಲು ಎದುರಾಗುತ್ತದೆ. ಆಗ ಒತ್ತಡವನ್ನು ನಿಭಾಯಿಸಿ ಆಡಬಲ್ಲ ಬ್ಯಾಟರ್ ಬೇಕಾಗುತ್ತದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಸದ್ಯ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದು, ವಿಶ್ವಕಪ್ಗೆ ಫಿಟ್ ಆಗುವ ಬಗ್ಗೆ ಇನ್ನೂ ಖಚಿತತೆ ಇಲ್ಲ. ಈ ನಡುವೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆಯುತ್ತಿರುವ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರಿಂದ ನಿರೀತ ನಿರ್ವಹಣೆ ಬರುತ್ತಿಲ್ಲ.