ಕ್ರೀಡೆ

ಉಬೆರ್​ ಕಪ್​ನಲ್ಲಿ ಎಂಟರ ಘಟ್ಟಕ್ಕೇರಿದ ಭಾರತದ ಯುವ ತಂಡ

ಚೆಂಗ್​ಡು (ಚೀನಾ): ಇಶಾರಾಣಿ ಬರುವಾ ಮತ್ತು ಅನ್ಮೋಲ್​ ರ್ಖಬ್​ ಭರ್ಜರಿ ನಿರ್ವಹಣೆಯ ಬಲದಿಂದ ಭಾರತದ ಯುವ ತಂಡ ಉಬೆರ್​ ಕಪ್​ ಮಹಿಳಾ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿ ಕ್ವಾರ್ಟರ್​ಫೈನಲ್​ ಪ್ರವೇಶ ಖಚಿತಪಡಿಸಿಕೊಂಡಿದೆ. ಭಾನುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡ 4-1ರಿಂದ ಸಿಂಗಾಪುರ ವಿರುದ್ಧ ಗೆಲುವು ದಾಖಲಿಸಿತು.

ಆರಂಭಿಕ ಪಂದ್ಯದಲ್ಲಿ ಅಶ್ಮಿತಾ ಚಾಲಿಹ 15-21, 18-21ರಿಂದ ಯಿಯೊ ಜಿಯಾ ಮಿನ್​ ಎದುರು ಪರಾಭವಗೊಂಡರು. ಬಳಿಕ ಭಾರತ ಉಳಿದ ಎರಡೂ ಸಿಂಗಲ್ಸ್​ ಮತ್ತು ಡಬಲ್ಸ್​ ಪಂದ್ಯಗಳಲ್ಲಿ ಗೆದ್ದು ಬೀಗಿತು. ಭಾರತ ಆರಂಭಿಕ ಪಂದ್ಯದಲ್ಲಿ ಕೆನಡ ವಿರುದ್ಧವೂ 4-1ರಿಂದ ಗೆದ್ದಿತ್ತು.

ಡಬಲ್ಸ್​ನಲ್ಲಿ ಪ್ರಿಯಾ ಕೆ-ಶ್ರುತಿ ಮಿಶ್ರಾ ಮತ್ತು ಸಿಮ್ರಾನ್​ ಸಿಂಘಿ-ರಿತಿಕಾ ಥಾಕರ್​ ಜೋಡಿ ಗೆಲುವು ಸಾಧಿಸಿತು. 2ನೇ ಸಿಂಗಲ್ಸ್​ ಪಂದ್ಯದಲ್ಲಿ ಇಶಾರಾಣಿ 21-13, 21-16ರಿಂದ ಇನ್​ಸ್ಯಿರಾ ಖಾನ್​ ಎದುರು ಗೆಲುವು ಸಾಧಿಸಿದರೆ, ಅನ್ಮೋಲ್​ 21-15, 21-13ರಿಂದ ಲೀ ಕ್ಸಿನ್​ ಯಿ ಮೆಗನ್​ ಎದುರು ಜಯಿಸಿದರು. ಭಾರತ ಈಗ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದು, ಮಂಗಳವಾರ ನಡೆಯಲಿರುವ ಕೊನೇ ಲೀಗ್​ ಪಂದ್ಯದಲ್ಲಿ ಅಗ್ರಸ್ಥಾನಿ ಚೀನಾ ತಂಡವನ್ನು ಎದುರಿಸಲಿದೆ. ಭಾರತ ಮಹಿಳಾ ತಂಡ 1957, 2014 ಮತ್ತು 2016ರಲ್ಲಿ ಸೆಮಿಫೈನಲ್​ಗೇರಿ ಪದಕ ಗೆದ್ದಿತ್ತು. ಈ ಬಾರಿ ಪಿವಿ ಸಿಂಧು ಜತೆಗೆ ಅನುಭವಿ ಡಬಲ್ಸ್​ ಆಟಗಾರ್ತಿಯರ ಗೈರಿನ ನಡುವೆಯೂ ಭಾರತ ನಾಕೌಟ್​ ಹಂತಕ್ಕೇರಿರುವುದು ವಿಶೇಷವಾಗಿದೆ.