ಕ್ರೀಡೆ

ಕ್ರಿಕೆಟ್​ನಲ್ಲಿ ಈವರೆಗೂ ನೀವು ಈ ರೀತಿಯ ಸಂಭ್ರಮಾಚರಣೆಯನ್ನೇ ನೋಡಿಲ್ಲ! ವಿಡಿಯೋ ವೈರಲ್​

ನವದೆಹಲಿ: ಕ್ರಿಕೆಟ್‌ನಲ್ಲಿ ಆಟಗಾರರ ಪ್ರತಿಕ್ರಿಯೆಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಗೆಲುವಿಗಾಗಿ ಮೈದಾನದಲ್ಲಿ ಶ್ರಮಿಸುವ ಆಟಗಾರರು ಗೆಲುವಿನ ಸಿಹಿ ಸವಿಯುವಾಗ ಚಿಕ್ಕ ಮಕ್ಕಳಂತೆ ಸಂಭ್ರಮಿಸುತ್ತಾರೆ. ಹಾರಾಡುತ್ತಾ, ಕೂಗಾಡುತ್ತಾ ಸಂತೋಷದಲ್ಲಿ ಮುಳುಗುತ್ತಾರೆ. ಆಟದಲ್ಲಿ ಭಾವನೆಗಳನ್ನು ತೋರಿಸುವುದು ಸಾಮಾನ್ಯ. ಗೆದ್ದಾಗ ಮಾತ್ರವಲ್ಲ, ಸೋತಾಗಲೂ ಆಟಗಾರರ ಪ್ರತಿಕ್ರಿಯೆಗಳು ವೈರಲ್ ಆಗುತ್ತವೆ. ಕಣ್ಣೀರು ಸುರಿಸುತ್ತಾ ತಮ್ಮ ನೋವನ್ನು ತೋರಿಸಿಕೊಳ್ಳುತ್ತಾರೆ. ಆದರೆ ಈ ರೀತಿ ಭಾವನೆಗಳನ್ನು ವ್ಯಕ್ತಪಡಿಸುವಾಗ ಕೆಲವೊಮ್ಮೆ ಇತರರಿಗೆ ತೊಂದರೆ ಸಹ ಆಗುತ್ತದೆ. ಇತ್ತೀಚೆಗೆ ನಡೆದ ಪಂದ್ಯವೊಂದರಲ್ಲಿ ಬ್ಯಾಟರ್ ಗೆಲುವಿನ ಸಂಭ್ರಮದ ಅಂಗವಾಗಿ ಅಂಪೈರ್​ಗೆ ಏಟು ಬಿದ್ದಿರುವುದು ಚರ್ಚೆಗೆ ಗ್ರಾಸವಾಗಿದೆ.

ವಿಕೆಟ್​ ಪಡೆದಾಗ ಬೌಲರ್‌ಗಳು ಸಂಭ್ರಮಿಸುವುದು ಮತ್ತು ಶತಕ ಬಾರಿಸಿದಾಗ ಬ್ಯಾಟ್ಸ್‌ಮನ್‌ಗಳು ಸಂಭ್ರಮಿಸುವುದು ಸಾಮಾನ್ಯ. ತಂಡವು ಗೆದ್ದಾಗ ತಂಡದ ಎಲ್ಲ ಆಟಗಾರರು ಒಟ್ಟಿಗೆ ಕ್ಷಣಗಳನ್ನು ಆನಂದಿಸುತ್ತಾರೆ ಮತ್ತು ಸಂಭ್ರಮಾಚರಣೆಯಲ್ಲಿ ಮುಳುಗುತ್ತಾರೆ. ಇತ್ತೀಚೆಗಷ್ಟೇ ಮೈದಾನದಲ್ಲಿ ತಂಡವೊಂದು ಹೀಗೆ ಸದ್ದು ಮಾಡಿತ್ತು. ವಿನ್ನಿಂಗ್ ಶಾಟ್ ಹೊಡೆದ ಬ್ಯಾಟರ್ ಖುಷಿಯನ್ನು ತಡೆಯಲಾರದೆ ಬ್ಯಾಟ್ ಎಸೆದರು ಮತ್ತು ವಿಭಿನ್ನ ಶೈಲಿಯಲ್ಲಿ ಸಂಭ್ರಮಿಸಿದರು.

ನಾನ್ ಸ್ಟ್ರೈಕಿಂಗ್ ಎಂಡ್​ನಲ್ಲಿದ್ದ ಬ್ಯಾಟರ್ ಖುಷಿಯಿಂದ ಡಗೌಟ್ ಕಡೆಗೆ ಓಡಿದ. ಆದರೆ, ವಿನ್ನಿಂಗ್ ಶಾಟ್ ಬಾರಿಸಿದ ಬ್ಯಾಟರ್ ಪಿಚ್​ನಲ್ಲೇ ಉಳಿದು ಜೋರಾಗಿ ಕೂಗುತ್ತಾ ಕಾಲಿನಿಂದ ವಿಚಿತ್ರವಾಗಿ ಭಂಗಿಯನ್ನು ಪ್ರದರ್ಶಿಸುತ್ತಾ ಬಹಳ ವಿಭಿನ್ನವಾಗಿ ಸಂಭ್ರಮಿಸಿದರು. ಈ ವೇಳೆ ಬ್ಯಾಟರ್​ ಎಸೆದ ಬ್ಯಾಟ್ ದೂರ ಹೋಗಿ ನಾನ್ ಸ್ಟ್ರೈಕಿಂಗ್ ಎಂಡ್​ನಲ್ಲಿದ್ದ ಅಂಪೈರ್ ಮೇಲೆ ಬಿದ್ದಿತು.

ಬ್ಯಾಟ್ ಬಂದು ಕಾಲಿಗೆ ತಾಗುತ್ತಿದ್ದಂತೆ ಅಂಪೈರ್ ಕೂಗಿದರು. ಅವರು ಬ್ಯಾಟರ್ ಕಡೆ ಕೋಪದಿಂದ ನೋಡಿದರು. ಅಲ್ಲದೆ, ಸಿಕ್ಸರ್​​ ಸಿಗ್ನಲ್​ ನೀಡಿ ಮತ್ತೆ ಪೆಟ್ಟು ಬಿದ್ದ ಕಾಲನ್ನು ಹಿಡಿದುಕೊಂಡರು. ಆದರೆ, ಬ್ಯಾಟರ್ ಅದನ್ನು ನಿರ್ಲಕ್ಷಿಸಿ ತನ್ನ ಸಂಭ್ರಮಾಚರಣೆಯಲ್ಲಿ ಮುಳುಗಿದನು. ಇದಾದ ಬಳಿಕ ಸಹ ಆಟಗಾರರೆಲ್ಲ ಪಿಚ್‌ಗೆ ಓಡಿ ಬಂದರು. ಸಿಕ್ಸರ್​ ಬಾರಿಸಿದ ಬ್ಯಾಟ್ಸ್​ಮನ್​ ತಬ್ಬಿಕೊಂಡು ಆನಂದಿಸಿದರು. ಈ ವೇಳೆ ಅಂಪೈರ್ ಕುಂಟುತ್ತಾ ಸಾಗುತ್ತಿರುವುದು ಕಂಡು ಬಂತು.

ಅಂದಹಾಗೆ ಈ ಘಟನೆ ಎಲ್ಲಿ ಮತ್ತು ಯಾವ ಪಂದ್ಯದಲ್ಲಿ ನಡೆದಿದೆ ಎಂಬ ವಿವರ ತಿಳಿದುಬಂದಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಕ್ರಿಕೆಟ್‌ನಲ್ಲಿ ಈ ರೀತಿಯದ್ದನ್ನು ಈ ಹಿಂದೆ ನೋಡಿಲ್ಲ ಎಂದು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕನಿಷ್ಠ ಅವರು ಅಂಪೈರ್ ಬಳಿ ಕ್ಷಮೆ ಕೇಳಲಿಲ್ಲ. ಸಂತೋಷ ಆಚರಿಸುವುದರಲ್ಲಿ ತಪ್ಪಿಲ್ಲ ಆದರೆ ಬೇರೆಯವರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಬ್ಯಾಟರ್​ ನಡೆಯನ್ನು ಖಂಡಿಸಿದ್ದಾರೆ. (ಏಜೆನ್ಸೀಸ್​)