ಕ್ರೀಡೆ

RCB ಸ್ಟಾರ್​​ ಬೌಲರ್ ಯಶ್ ದಯಾಳ್​ಗೆ ತಪ್ಪದ ಸಂಕಷ್ಟ: ಮತ್ತೊಂದು ರೇಪ್​ ಕೇಸ್​ ದಾಖಲು! Yash Dayal ​

Yash Dayal : ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಸ್ಟಾರ್​ ಬೌಲರ್ ಯಶ್ ದಯಾಳ್ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಸುಮಾರು 2 ವರ್ಷಗಳ ಕಾಲ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಭಾವನಾತ್ಮಕವಾಗಿ ಬ್ಲಾಕ್​ಮೇಲ್​ ಮಾಡಿದ ಆರೋಪದ ಮೇಲೆ ಜೈಪುರದ ಸಂಗನೇರ್ ಪೊಲೀಸ್ ಠಾಣೆಯಲ್ಲಿ ದಯಾಳ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಸಂತ್ರಸ್ತೆಗೆ ಕ್ರಿಕೆಟ್ ವೃತ್ತಿಜೀವನದ ಭರವಸೆ ನೀಡಿ, ಸೀತಾಪುರದ ಹೋಟೆಲ್‌ಗೆ ಆಹ್ವಾನಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ದಯಾಳ್​ ವಿರುದ್ಧ ಕೇಳಿಬಂದಿದೆ. ಮೊದಲ ಪ್ರಕರಣ ನಡೆದಾಗ ಬಾಲಕಿಗೆ ಕೇವಲ 17 ವರ್ಷ ವಯಸ್ಸಾಗಿತ್ತು ಆದ್ದರಿಂದ, ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಯಾಳ್​ ವಿರುದ್ಧ ಇದೀಗ ಪ್ರಕರಣ ದಾಖಲಿಸಿದ್ದಾರೆ.

ಈ ಹಿಂದೆ ಬೇರೆ ಯುವತಿಯೊಬ್ಬಳು ದಯಾಳ್​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಳು. ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿದ್ದರು. ಈ ಸಂಬಂಧ ಉತ್ತರ ಪ್ರದೇಶದಲ್ಲಿ ದಯಾಳ್ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ತನ್ನ ಬಂಧನಕ್ಕೆ ತಡೆ ನೀಡುವುದರ ಜೊತೆಗೆ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ದಯಾಳ್ ತಮ್ಮ ಅರ್ಜಿಯಲ್ಲಿ ಕೋರಿದ್ದರು. ಎಫ್‌ಐಆರ್‌ಗೆ ಸಂಬಂಧಿಸಿದಂತೆ ದಯಾಳ್​ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ತಡೆ ನೀಡಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಈ ಹಿಂದಿನ ಪ್ರಕರಣದಲ್ಲಿ ದಾಖಲಾಗಿದ್ದ ಎಫ್‌ಐಆರ್ ಪ್ರಶ್ನಿಸಿ, ದಯಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಅನಿಲ್ ಕುಮಾರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಬಂಧನಕ್ಕೆ ತಡೆ ನೀಡಿತು. ಇದೇ ಸಂದರ್ಭದಲ್ಲಿ ಕೌಂಟರ್​ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ವಕೀಲರನ್ನು ನ್ಯಾಯಾಲಯ ಕೇಳಿದೆ ಮತ್ತು ಈ ವಿಷಯದಲ್ಲಿ ಪ್ರತಿವಾದ ಸಲ್ಲಿಸುವಂತೆ ದೂರುದಾರರಿಗೆ ನೋಟಿಸ್ ನೀಡಿದೆ. ಸದ್ಯಕ್ಕೆ ನ್ಯಾಯಾಲಯ ತಡೆ ನೀಡಿ, ತಾತ್ಕಾಲಿಕ ರಿಲೀಫ್​ ನೀಡಿದೆ. ಇದರ ಬೆನ್ನಲ್ಲೇ ಮತ್ತೊಂದು ಕೇಸ್​ ದಾಖಲಾಗಿದ್ದು, ದಯಾಳ್​ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಪ್ರಯಾಗ್‌ರಾಜ್‌ ಮೂಲದ 27 ವರ್ಷದ ಎಡಗೈ ವೇಗಿ ದಯಾಳ್, ಗುಜರಾತ್ ಟೈಟಾನ್ಸ್ ಮತ್ತು ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ಪರ ಆಡುವ ಮೂಲಕ ಐಪಿಎಲ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ಆರ್‌ಸಿಬಿ ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ದಯಾಳ್​ ಅವರು ಪ್ರಮುಖ ಪಾತ್ರ ವಹಿಸಿದರು. (ಏಜೆನ್ಸೀಸ್​)