ಕ್ರೀಡೆ

ದೈಹಿಕವಾಗಿ ಬಳಸಿಕೊಂಡು ವಂಚನೆ: RCB ಸ್ಟಾರ್​ ಯಶ್​ ದಯಾಳ್​ ವಿರುದ್ಧ ಕೇಳಿಬಂತು ಗಂಭೀರ ಆರೋಪ! Yash Dayal

Yash Dayal : ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಸ್ಟಾರ್​ ಬೌಲರ್ ಯಶ್ ದಯಾಳ್ ವಿರುದ್ಧ ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ, ಮಾನಸಿಕ, ಭಾವನಾತ್ಮಕ ಹಾಗೂ ದೈಹಿಕವಾಗಿ ದೌರ್ಜನ್ಯ ಎಸಗಿದ್ದಾನೆಂದು ಸಂತ್ರಸ್ತ ಯುವತಿ ಯಶ್​ ವಿರುದ್ಧ ದೂರು ನೀಡಿದ್ದು, ಎಫ್​ಐಆರ್​ ಕೂಡ ದಾಖಲಾಗಿದೆ.

ಸಂತ್ರಸ್ತೆ, ಉತ್ತರ ಪ್ರದೇಶ ಮುಖ್ಯಮಂತ್ರಿಯವರ ಆನ್‌ಲೈನ್ ಪೋರ್ಟಲ್ ಐಜಿಆರ್‌ಎಸ್ ಮೂಲಕ ದೂರನ್ನು ಸಲ್ಲಿಸಿದ್ದಾಳೆ. ದೂರನ್ನು ಗಮನಿಸಿದ ಸಿಎಂ ಕಚೇರಿ, ಇಂದಿರಾಪುರಂನ ವೃತ್ತ ಅಧಿಕಾರಿ (ಸಿಒ) ಬಳಿ ವರದಿ ಕೋರಿದೆ. ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಲು ಗಾಜಿಯಾಬಾದ್ ಪೊಲೀಸರಿಗೆ ಜುಲೈ 21 ರವರೆಗೆ ಗಡುವು ನೀಡಲಾಗಿದೆ ಎಂದು ವರದಿಯಾಗಿದೆ.

ನಾನು ಮತ್ತು ಯಶ್ ಕಳೆದ ಐದು ವರ್ಷಗಳಿಂದ ಒಟ್ಟಿಗೆ ಇದ್ದೆವು ಮತ್ತು ಆತ ತನ್ನೊಂದಿಗೆ ಎಲ್ಲಾ ರೀತಿಯ ಸಂಬಂಧಗಳನ್ನು ಹೊಂದಿದ್ದಾನೆ. ಆದರೆ, ಈಗ ಮದುವೆ ಆಗಲು ನಿರಾಕರಿಸುತ್ತಿದ್ದಾನೆ. ನನ್ನನ್ನು ತನ್ನ ಕುಟುಂಬಕ್ಕೆ ಪರಿಚಯಿಸಿ, ಗಂಡನಂತೆ ವರ್ತಿಸಿದನು. ಅದರಿಂದ ನನಗೆ ಆತನ ಮೇಲೆ ನಂಬಿಕೆ ಹೆಚ್ಚಾಯಿತು ಎಂದಿರುವ ಸಂತ್ರಸ್ತೆ, ಬೇರೆ ಹುಡುಗಿಯರೊಂದಿಗೆ ಸಂಬಂಧ ಹೊಂದುವ ಮೂಲಕ ಯಶ್​ ದಯಾಳ್​ ನನಗೆ ಮೋಸ ಮಾಡಿದ್ದಾನೆಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾಳೆ.

ತನ್ನ ಹೆಸರು ಸೇರಿದಂತೆ ಈ ಎಲ್ಲ ವಿಷಯಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿರುವ ಯುವತಿ, ಅಧಿಕೃತವಾಗಿ ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಹಿಂದೆ ಮಹಿಳಾ ಸಹಾಯವಾಣಿಯ ಮೂಲಕ ತನ್ನ ಸಮಸ್ಯೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸಿದ್ದೆ ಆದರೆ, ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಆರೋಪಿಸಿರುವ ಸಂತ್ರಸ್ತೆ, ಇದೀಗ ನೇರವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.

ತಾನು ಮಾಡಿರುವ ಆರೋಪಗಳಿಗೆ ಸಾಕ್ಷಿಯಾಗಿ ತನ್ನ ಬಳಿ ಚಾಟ್ ರೆಕಾರ್ಡ್‌ಗಳು, ಸ್ಕ್ರೀನ್‌ಶಾಟ್‌ಗಳು, ವಿಡಿಯೋ ಕರೆಗಳು ಮತ್ತು ಫೋಟೋಗಳಿವೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ಈ ವಿಷಯದ ಬಗ್ಗೆ ತ್ವರಿತ ತನಿಖೆ ನಡೆಸಬೇಕು ಮತ್ತು ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವತಿ ಎಫ್​ಐಆರ್​ನಲ್ಲಿ ಮನವಿ ಮಾಡಿಕೊಂಡಿದ್ದಾಳೆ. ಈ ಕ್ರಮವು ತನಗೆ ಮಾತ್ರವಲ್ಲದೆ ಮೋಸದ ಸಂಬಂಧಗಳಿಗೆ ಬಲಿಯಾಗುವ ಎಲ್ಲ ಹುಡುಗಿಯರಿಗೂ ಮುಖ್ಯವಾಗಿದೆ ಎಂದು ಸಂತ್ರಸ್ತೆ ಹೇಳಿದ್ದಾಳೆ.

ಸದ್ಯ ಯುವತಿ ಮಾಡಿರುವ ಆರೋಪಗಳಿಗೆ ಯಶ್​ ದಯಾಳ್ ಅವರು ಇನ್ನೂ ಪ್ರತಿಕ್ರಿಯಿಸಿಲ್ಲ. ಪ್ರಯಾಗ್‌ರಾಜ್‌ ಮೂಲದ 27 ವರ್ಷದ ಎಡಗೈ ವೇಗಿ ದಯಾಳ್, ಗುಜರಾತ್ ಟೈಟಾನ್ಸ್ ಮತ್ತು ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ಪರ ಆಡುವ ಮೂಲಕ ಐಪಿಎಲ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ಆರ್‌ಸಿಬಿ ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ದಯಾಳ್​ ಅವರು ಪ್ರಮುಖ ಪಾತ್ರ ವಹಿಸಿದರು. (ಏಜೆನ್ಸೀಸ್​)