ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿಯ ಬನಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಬಂಡಿ ಆರೋಗ್ಯ ಕೇಂದ್ರ ಹಮ್ಮಿಕೊಂಡಿದ್ದ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳು. 
ಕ್ರೀಡೆ

ನಿತ್ಯ ಯೋಗಾಸನ ಮಾಡುವುದರಿಂದ ಮನಸ್ಸಿನ ಚಂಚಲತೆ ದೂರ

ಯಲಬುರ್ಗಾ: ನಿತ್ಯ ಯೋಗಾಸನ ಮಾಡುವುದರಿಂದ ಮನಸ್ಸಿನ ಚಂಚಲತೆ ದೂರವಾಗುತ್ತದೆ ಎಂದು ಯೋಗ ತರಬೇತುದಾರ ಲೋಕೇಶ ಲಮಾಣಿ ಹೇಳಿದರು.

ತಾಲೂಕಿನ ಹಿರೇಅರಳಹಳ್ಳಿ ಗ್ರಾಮದ ಬನಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಬಂಡಿ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಹಮ್ಮಿಕೊಂಡಿದ್ದ ಯೋಗ ಶಿಬಿರದಲ್ಲಿ ಮಾತನಾಡಿದರು.

ಮನುಷ್ಯನಿಗೆ ವಿಶ್ರಾಂತಿ ರಹಿತ ಕೆಲಸ, ಮಾನಸಿಕ ಒತ್ತಡ ಮತ್ತು ಆಧುನಿಕ ಆಹಾರ ಪದ್ಧತಿಯಿಂದ ಹಲವು ರೋಗಗಳು ಕಾಡುತ್ತಿವೆ. ನಮ್ಮ ನರಮಂಡಲ ಹತೋಟಿಯಲ್ಲಿಡಲು ಮತ್ತು ಆರೋಗ್ಯಪೂರ್ಣ ಬದುಕಿಗೆ ಪ್ರಮುಖವಾಗಿ ಧ್ಯಾನ, ಪ್ರಾಣಾಯಾಮ ಸಹಕಾರಿಯಾಗಿದೆ.

ಇದರಿಂದ ದೈಹಿಕ-ಮಾನಸಿಕ ಶಕ್ತಿಯೂ ಸುಧಾರಿಸುತ್ತದೆ. ಪ್ರತಿಯೊಬ್ಬರೂ ನಿತ್ಯ ಯೋಗದಲ್ಲಿ ತೊಡಗುವುದರಿಂದ ಮನಸ್ಸು ಪ್ರಫುಲ್ಲವಾಗಿರುತ್ತದೆ. ಕ್ರಿಯಾಶೀಲತೆ ಹೆಚ್ಚುತ್ತದೆ ಎಂದರು.

ಇದೇ ವೇಳೆ ಮಕ್ಕಳಿಗೆ ಪ್ರಾಣಾಯಾಮ, ಧ್ಯಾನ ಕುರಿತು ಪ್ರಾಯೋಗಿಕವಾಗಿ ಹೇಳಿಕೊಡಲಾಯಿತು. ಶಿಬಿರದಲ್ಲಿ 190ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಸ್ಥೆಯ ಮುಖ್ಯಶಿಕ್ಷಕ ಶೇಖರಗೌಡ ರಾಮತ್ನಾಳ, ಶಿಕ್ಷಕರಾದ ನಾಗರಾಜ ಕಾಮನೂರು, ಪ್ರವೀಣ ಇತರರಿದ್ದರು.