ದುಬೈ: ಭಾರತ-ನ್ಯೂಜಿಲೆಂಡ್ ನಡುವಿನ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದ ವಿಜೇತರು ಟೆಸ್ಟ್ ಚಾಂಪಿಯನ್‌ಷಿಪ್ ಗದೆಯೊಂದಿಗೆ 11.71 ಕೋಟಿ ರೂಪಾಯಿ (16 ಲಕ್ಷ ಅಮೆರಿಕನ್ ಡಾಲರ್) ಬಹುಮಾನ ಪಡೆಯಲಿದ್ದಾರೆ ಎಂದು ಐಸಿಸಿ ಸೋಮವಾರ ಪ್ರಕಟಿಸಿದೆ.
ರನ್ನರ್‌ಅಪ್ ತಂಡ 5.85 ಕೋಟಿ ರೂ. (8 ಲಕ್ಷ ಡಾಲರ್) ಗಳಿಸಲಿದೆ. ಒಂದು ವೇಳೆ ಪಂದ್ಯ ಡ್ರಾ ಅಥವಾ ಟೈಗೊಂಡು ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಿದರೆ, ಫೈನಲ್ ಪಂದ್ಯದ ಒಟ್ಟು ಬಹುಮಾನ ಮೊತ್ತವಾದ 17.57 ಕೋಟಿ ರೂಪಾಯಿಯನ್ನು ಸಮನಾಗಿ ಹಂಚಲಾಗುವುದು ಎಂದು ಐಸಿಸಿ ತಿಳಿಸಿದೆ.
ಕಳೆದೆರಡು ವರ್ಷಗಳಿಂದ ನಡೆದ 9 ತಂಡಗಳ ಡಬ್ಲ್ಯುಟಿಸಿಯಲ್ಲಿ 3ನೇ ಸ್ಥಾನ ಪಡೆದ ತಂಡ (ಆಸ್ಟ್ರೇಲಿಯಾ) 3.29 ಕೋಟಿ ರೂ. ಮತ್ತು 4ನೇ ಸ್ಥಾನ ಪಡೆದ ತಂಡ (ಇಂಗ್ಲೆಂಡ್) 2.56 ಕೋಟಿ ರೂ. ಗಳಿಸಲಿದೆ. 5ನೇ ಸ್ಥಾನಿ ತಂಡ (ಪಾಕಿಸ್ತಾನ) 1.46 ಕೋಟಿ ರೂ. ಪಡೆದರೆ, ಉಳಿದ 4 ತಂಡಗಳು (ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ) ತಲಾ 73 ಲಕ್ಷ ರೂ. ಗಳಿಸಲಿವೆ.
ಈ ಹಿಂದೆ ಪ್ರತಿ ವರ್ಷ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನಂ. 1 ಸ್ಥಾನ ಪಡೆದ ತಂಡಕ್ಕೆ ನೀಡಲಾಗುತ್ತಿದ್ದ ಟೆಸ್ಟ್ ಚಾಂಪಿಯನ್‌ಷಿಪ್ ಗದೆಯನ್ನು ಡಬ್ಲ್ಯುಟಿಸಿ ವಿಜೇತರಿಗೆ ಟ್ರೋಫಿಯನ್ನಾಗಿ ನೀಡಲಾಗುವುದು. ಜಂಟಿ ಚಾಂಪಿಯನ್ ಆದರೂ ಅದೇ ಟ್ರೋಫಿ ಹಂಚಿಕೆ ಮಾಡಲಾಗುವುದು ಎಂದು ಐಸಿಸಿ ತಿಳಿಸಿದೆ.