ಪ್ಯಾರಿಸ್: ಭಾರತಕ್ಕೆ ಕಳೆದ 4 ಒಲಿಂಪಿಕ್ಸ್ಗಳಲ್ಲಿ 6 ಪದಕಗಳನ್ನು (2 ಬೆಳ್ಳಿ, 4 ಕಂಚು) ಗೆದ್ದುಕೊಟ್ಟಿರುವ ಕುಸ್ತಿ ಸ್ಪರ್ಧೆಗೆ ಸೋಮವಾರ ಚಾಲನೆ ಸಿಗಲಿದೆ. ಈ ಬಾರಿ ಓರ್ವ ಪುರುಷ ಪೈಲ್ವಾನ್ ಸಹಿತ ಆರು ಭಾರತೀಯರು ಕಣದಲ್ಲಿದ್ದು, ಸತತ 5ನೇ ಒಲಿಂಪಿಕ್ಸ್ನಲ್ಲೂ ಕುಸ್ತಿಪಟುಗಳಿಂದ ಪದಕ ಬೇಟೆ ಮುಂದುವರಿಯುವ ನಿರೀಕ್ಷೆ ಇದೆ.
ನಿಶಾ ದಹಿಯಾ 68 ಕೆಜಿ ವಿಭಾಗದಲ್ಲಿ ಮೊದಲ ದಿನವೇ ಕಣಕ್ಕಿಳಿಯಲಿದ್ದು, ಭಾರತದ ಕುಸ್ತಿ ಅಭಿಯಾನಕ್ಕೂ ಚಾಲನೆ ನೀಡಲಿದ್ದಾರೆ. ವಿನೇಶ್ ಪೋಗಟ್ (50 ಕೆಜಿ ವಿಭಾಗ-ಸ್ಪರ್ಧೆ: ಆ.6-7), ಅಂತಿಮ್ ಪಾಂಗಲ್ (53 ಕೆಜಿ ವಿಭಾಗ-ಸ್ಪರ್ಧೆ: ಆ. 7-8), ಅಂಶು ಮಲಿಕ್ (57 ಕೆಜಿ ವಿಭಾಗ-ಸ್ಪರ್ಧೆ: ಆ.8-9), ಅಮನ್ ಸೆಹ್ರಾವತ್ (57 ಕೆಜಿ ವಿಭಾಗ-ಸ್ಪರ್ಧೆ: ಆ. 8-9), ರೀತಿಕಾ ಹೂಡಾ (76 ಕೆಜಿ ವಿಭಾಗ-ಆ.10-11) ಕಣದಲ್ಲಿರುವ ಪ್ರಮುಖ ಕುಸ್ತಿಪಟುಗಳಾಗಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಕುಸ್ತಿ ಅಖಾಡದ ಹೊರಗೆಯೇ ಹೆಚ್ಚು ಸುದ್ದಿಯಲ್ಲಿದ್ದ ಅನುಭವಿ ಕುಸ್ತಿಪಟು ವಿನೇಶ್ ಪೋಗಟ್ 3ನೇ ಬಾರಿ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿದ್ದು, ಪದಕದ ಕನಸು ನನಸಾಗಿಸುವ ಹಂಬಲದಲ್ಲಿದ್ದಾರೆ. ಅಂತಿಮ್ ಪಾಂಗಲ್ ಭಾರತದ ಮತ್ತೋರ್ವ ಪ್ರಮುಖ ಪದಕ ಆಕಾಂಯಾಗಿದ್ದಾರೆ.
ಪುರುಷರ 57 ಕೆಜಿ ವಿಭಾಗದಲ್ಲಿ ಕಳೆದ ಬಾರಿ ರವಿ ದಹಿಯಾ ರಜತ ಪದಕ ಜಯಿಸಿದ್ದರು. ಈ ಬಾರಿ ಅವರನ್ನು ಹಿಮ್ಮೆಟ್ಟಿಸಿ ಅಮನ್ ಸೆಹ್ರಾವತ್ ಅರ್ಹತೆ ಸಂಪಾದಿಸಿದ್ದಾರೆ. ಹೀಗಾಗಿ ಅವರ ಮೇಲೂ ಹೆಚ್ಚಿನ ನಿರೀಕ್ಷೆಗಳಿವೆ.