ಕ್ರೀಡೆ

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಘರ್ಜನೆ: ಸಮೀಸ್​ಗೆ ಲಗ್ಗೆ, ಪದಕಕ್ಕೆ ಇನ್ನೊಂದೇ ಹೆಜ್ಜೆ

ಪ್ಯಾರಿಸ್​: ಅಂತಾರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಈವರೆಗೂ ಸೋಲೇ ಕಾಣದ ಜಪಾನಿನ ಯುಯಿ ಸುಸಾಕಿಯನ್ನು ಪ್ಯಾರಿಸ್​ ಒಲಿಂಪಿಕ್ಸ್​ನ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಸೋಲಿಸಿ ಕ್ವಾರ್ಟರ್-ಫೈನಲ್ ತಲುಪಿದ್ದ ಭಾರತದ ಹೆಣ್ಣು ಹುಲಿ ವಿನೇಶ್​ ಪೋಗಟ್​, ಇದೀಗ ಯೂಕ್ರೇನ್​ ಕುಸ್ತಿಪಟುಗೆ ಮಣ್ಣು ಮುಕ್ಕಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.

ಯೂಕ್ರೇನ್‌ನ ಒಕ್ಸಾನಾ ಲಿವಾಚ್ ವಿರುದ್ಧ ನಡೆದ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ 7-5 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಪದಕ ಗೆಲ್ಲಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ. ಕ್ವಾರ್ಟರ್-ಫೈನಲ್ ಆರಂಭದಲ್ಲೇ 4-0 ಅಂತರ ಕಾಯ್ದುಕೊಳ್ಳುವ ಮೂಲಕ ಎದುರಾಳಿಯ ಎದೆಯಲ್ಲಿ ವಿನೇಶ್​ ನಡುಕ ಹುಟ್ಟಿಸಿದರು. ವಿನೇಶ್​ ಆಡುತ್ತಿರುವ ಪರಿ ನೋಡಿದರೆ ಭಾರತಕ್ಕೆ ಮತ್ತೊಂದು ಪದಕ ಖಚಿತ ಎಂದು ಹೇಳಬಹುದಾಗಿದೆ.

ಇದಕ್ಕೂ ಮುನ್ನ ಕುಸ್ತಿ ಸ್ಪರ್ಧೆಯ 16ನೇ ಸುತ್ತಿನಲ್ಲಿ 3-2 ಅಂಕಗಳ ಅಂತರದಲ್ಲಿ ಜಪಾನ್​ನ ಯುಯಿ ಸುಸಾಕಿಯನ್ನು ಸೋಲಿಸಿ ವಿನೇಶ್​ ಕ್ವಾರ್ಟರ್-ಫೈನಲ್​ಗೆ ಲಗ್ಗೆ ಇಟ್ಟರು. ಈ ಸುಸಾಕಿ ಕಳೆದ ಟೊಕಿಯೋ ಒಲಿಂಪಿಕ್ಸ್​ನಲ್ಲಿ ಪ್ರತಿಸ್ಪರ್ಧಿಗೆ ಒಂದೇ ಒಂದು ಅಂಕವನ್ನು ಬಿಟ್ಟುಕೊಡದೇ ಅಜೇಯವಾಗಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಇಂತಹ ಅಗ್ರ ಕ್ರಮಾಂಕದ ಕುಸ್ತಿಪಟುವಿಗೆ ಸೋಲಿನ ರುಚಿ ತೋರಿಸುವ ಮೂಲಕ ವಿನೇಶ್ ಫೋಗಟ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಸಾಕಿಯನ್ನು ಸೋಲಿಸಿದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್​ ಭಾಜನರಾಗಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ವಿನೇಶ್​ ಅವರು 50 ಕೆಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದು ಇದೇ ಮೊದಲು. (ಏಜೆನ್ಸೀಸ್​)