ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್ ಅವರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ (HRT) ಪಡೆದ ನಂತರ ಅವರು ಹುಡುಗಿಯಾಗಿ ಬದಲಾಗಿದ್ದಾರೆ. ಹೀಗಾಗಿ ತಮ್ಮ ಹೆಸರನ್ನು ಅನಯಾ ಬಂಗಾರ್ ( Anaya Bangar ) ಎಂದು ಬದಲಾಯಿಸಿಕೊಂಡಿದ್ದಾರೆ.
ಆರ್ಯನ್ನಿಂದ ಅನಯಾ ಆಗಿ ಬದಲಾದ ಬಳಿಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ದೇಹ ಬದಲಾವಣೆ ಅಥವಾ ರೂಪಾಂತರದ ಬಗ್ಗೆ ಸಾಕಷ್ಟು ವಿವರಗಳನ್ನು ಹಂಚಿಕೊಂಡರು. ಈ ಮಧ್ಯೆ ಅವರು ರಿಯಾಲಿಟಿ ಶೋ ಒಂದರಲ್ಲಿಯೂ ಭಾಗವಹಿಸಿದ್ದರು.
ತಾಜಾ ಸಂಗತಿ ಏನೆಂದರೆ, ಇತ್ತೀಚೆಗೆ, ಅನಯಾ ಅವರು ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ಅನಯಾ ಭಾಗವಹಿಸುವಿಕೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಶುರುವಾಗಿವೆ.
ಅನಯಾ ಬಂಗಾರ್ ಅವರ ತಂದೆ ಸಂಜಯ್ ಬಂಗಾರ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕೋಚ್ ಆಗಿದ್ದರು. ಆದ್ದರಿಂದ ಅನಯಾ ಕೂಡ ಅದೇ ತಂಡಕ್ಕೆ ಆಡುವ ನಿರೀಕ್ಷೆಯಿದೆ. ಏಕೆಂದರೆ, ಇತ್ತೀಚೆಗೆ ಬಿಡುಗಡೆಯಾದ ವಿಡಿಯೋದಲ್ಲಿ, ಆರ್ಸಿಬಿ ಕ್ರಿಕೆಟ್ ಕಿಟ್ ಬ್ಯಾಗ್‌ನೊಂದಿಗೆ ಮೈದಾನಕ್ಕೆ ಬಂದು ಅಭ್ಯಾಸ ಮಾಡುತ್ತಿರುವ ದೃಶ್ಯವಿದೆ.
ವಿಡಿಯೋದಲ್ಲಿ ಅನಯಾ ಅವರು ಮೊದಲು ರನ್ನಿಂಗ್ ಮಾಡುತ್ತಾರೆ. ಆ ಬಳಿಕ ತಮ್ಮ ಪ್ಯಾಡ್‌ಗಳನ್ನು ಹಾಕಿಕೊಂಡು ಬ್ಯಾಟ್ ಕೈಗೆತ್ತಿಕೊಳ್ಳುತ್ತಾರೆ. ಅಲ್ಲದೆ, ಬ್ಯಾಟ್ ಮೂಲಕ ತಮ್ಮ ಬ್ಯಾಟಿಂಗ್ ಶೈಲಿಯನ್ನೂ ಪ್ರದರ್ಶಿಸಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅನಯಾ ಅವರು ಆರ್ಸಿಬಿ ಮಹಿಳಾ ತಂಡವನ್ನು ಸೇರಬಹುದು ಎಂಬ ಊಹಾಪೋಹಕ್ಕೆ ಈ ವಿಡಿಯೋ ಕಾರಣವಾಗಿದೆ. ಆದಾಗ್ಯೂ, ಐಸಿಸಿ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಿಂದ ಟ್ರಾನ್ಸ್‌ಜೆಂಡರ್ ಆಟಗಾರ್ತಿಯರನ್ನು ನಿಷೇಧಿಸಿರುವುದರಿಂದ, ಅನಯಾ ಅವರಿಗೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಅವಕಾಶ ನೀಡಲಾಗುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಅಂದಹಾಗೆ, ಅನಯಾ ಅವರು ರೈಸ್ ಅಂಡ್ ಫಾಲ್ ರಿಯಾಲಿಟಿ ಶೋನಲ್ಲಿ ಈ ಹಿಂದೆ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು ನಾನು ನನ್ನ ಹಕ್ಕುಗಳಿಗಾಗಿ ಹೋರಾಡುತ್ತೇನೆ. ಒಂದು ದಿನ ನಾನು ಭಾರತಕ್ಕಾಗಿ ವಿಶ್ವಕಪ್ ಗೆಲ್ಲುತ್ತೇನೆ ಎಂದು ಭಾವನಾತ್ಮಕವಾಗಿ ಹೇಳಿದ್ದರು. ಇತ್ತೀಚೆಗೆ, ಭಾರತೀಯ ಮಹಿಳಾ ತಂಡ 2025ರ ಏಕದಿನ ವಿಶ್ವಕಪ್ ಗೆದ್ದಾಗ, ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಮಹಿಳಾ ತಂಡವನ್ನು ಅಭಿನಂದಿಸಿದರು.
ಅನಯಾ ಅವರ ಇತ್ತೀಚಿನ ಪೋಸ್ಟ್‌ಗಳು ಹೆಚ್ಚಾಗಿ ವೃತ್ತಿಪರ ಕ್ರಿಕೆಟ್‌ಗೆ ಪ್ರವೇಶಿಸಲು ಅವರು ಶ್ರಮಿಸುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ. ಆದರೆ, ಕ್ರಿಕೆಟ್ ನಿಯಮಗಳು ಅದಕ್ಕೆ ವಿರುದ್ಧವಾಗಿವೆ. ಕ್ರಿಕೆಟ್ ಆಡುವ ಅವರ ಕನಸು ನನಸಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಅಂದಹಾಗೆ, ಸಂಜಯ್ ಬಂಗಾರ್‌ಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರಲ್ಲಿ ಆರ್ಯನ್ ಹಿರಿಯ ಮಗನಾಗಿದ್ದರು. ಇದೀಗ ಲಿಂಗ ಬದಲಾವಣೆ ಮಾಡಿಕೊಂಡಿದ್ದಾರೆ. ಸಂಜಯ್ ಬಂಗಾರ್ ಅವರು ಭಾರತಕ್ಕಾಗಿ 12 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. (ಏಜೆನ್ಸೀಸ್)