ಕ್ರೀಡೆ

WPL-2025: ಯುಪಿ ವಾರಿಯರ್ಸ್ ಆರ್ಭಟಕ್ಕೆ ಬೆದರಿದ ಆರ್​ಸಿಬಿ; ಪ್ರಶಸ್ತಿ ಉಳಿಸಿಕೊಳ್ಳುವ ಕನಸು ಭಗ್ನ!

ಲಖನೌ: ಆಸ್ಟ್ರೆಲಿಯಾದ ಯುವ ಬ್ಯಾಟರ್​ ಜಾರ್ಜಿಯಾ ವೋಲ್​ (99*ರನ್​, 56 ಎಸೆತ, 17 ಬೌಂಡರಿ, 1 ಸಿಕ್ಸರ್​) ಶತಕವಂಚಿತ ಬ್ಯಾಟಿಂಗ್​ ಬಲದಿಂದ ಯುಪಿ ವಾರಿಯರ್ಸ್​ ತಂಡ ಹರಿಸಿದ ರನ್​ಮಳೆ ಎದುರು ಮಂಕಾದ ಹಾಲಿ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ವುಮೆನ್ಸ್​ ಪ್ರೀಮಿಯರ್​ ಲೀಗ್​ 3ನೇ ಆವೃತ್ತಿಯಲ್ಲಿ 12 ರನ್​ಗಳಿಂದ ವೀರೋಚಿತ ಸೋಲು ಕಂಡಿದೆ. ಇದರೊಂದಿಗೆ ಆರ್​ಸಿಬಿ ತಂಡ ಪ್ಲೇಆ್​ ರೇಸ್​ನಿಂದ ಹೊರಬಿದ್ದು ಪ್ರಶಸ್ತಿ ಉಳಿಸಿಕೊಳ್ಳಲು ವಿಫಲವಾಗಿದ್ದರೆ, ಯುಪಿ ವಾರಿಯರ್ಸ್​ ತಂಡ ಟೂರ್ನಿಗೆ ಗೆಲುವಿನ ವಿದಾಯ ಹೇಳಿದೆ. ಜತೆಗೆ ಡೆಲ್ಲಿ ನಂತರ ಗುಜರಾತ್​ ಜೈಂಟ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳ ಪ್ಲೇಆಫ್​ ಪ್ರವೇಶವೂ ಖಚಿತಗೊಂಡಿದೆ.

ಏಕನಾ ಸ್ಟೇಡಿಯಂನಲ್ಲಿ ಶನಿವಾರ ನಡೆದ ಲಖನೌ ಚರಣದ ಕೊನೇ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಯುಪಿ 5 ವಿಕೆಟ್​ಗೆ 225 ರನ್​ ಕಲೆಹಾಕಿತು. ಇದು ಡಬ್ಲ್ಯುಪಿಎಲ್​ನಲ್ಲಿ ಸರ್ವಾಧಿಕ ಮೊತ್ತವಾಗಿದೆ. 2023ರಲ್ಲಿ ಆರ್​ಸಿಬಿ ವಿರುದ್ಧ ಡೆಲ್ಲಿ 223 ರನ್​ ಗಳಿಸಿದ್ದು ಹಿಂದಿನ ಗರಿಷ್ಠ. ಪ್ರತಿಯಾಗಿ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಗೆಲುವಿಗೆ ದಾಖಲೆಯ ಮೊತ್ತದ ಚೇಸಿಂಗ್​ ಮಾಡುವ ಒತ್ತಡಕ್ಕೆ ಸಿಲುಕಿದ ಆರ್​ಸಿಬಿ, ರಿಚಾ ಘೋಷ್​ (69 ರನ್​, 33 ಎಸೆತ, 6 ಬೌಂಡರಿ, 5 ಸಿಕ್ಸರ್​) ಮತ್ತು ಕೊನೆಯಲ್ಲಿ ಸ್ನೇಹಾ ರಾಣಾ (26 ರನ್​, 6 ಎಸೆತ, 2 ಬೌಂಡರಿ, 3 ಸಿಕ್ಸರ್​) ಪ್ರದರ್ಶಿಸಿದ ಸ್ಫೋಟಕ ಬ್ಯಾಟಿಂಗ್​ ನಡುವೆಯೂ 19.3 ಓವರ್​ಗಳಲ್ಲಿ 213 ರನ್​ಗಳಿಗೆ ಆಲೌಟ್​ ಆಗಿ ಶರಣಾಯಿತು.

ವೋಲ್​ ಆರ್ಭಟ: ಮೊದಲ ವಿಕೆಟ್​ಗೆ ಗ್ರೇಸ್​ ಹ್ಯಾರಿಸ್​ (39) ಜತೆ 43 ಎಸೆತಗಳಲ್ಲಿ 77 ರನ್​ ಕಸಿದು ಯುಪಿಗೆ ಭದ್ರ ಬುನಾದಿ ಹಾಕಿಕೊಟ್ಟ 21 ವರ್ಷದ ವೋಲ್​, ನಂತರ ಕಿರಣ್​ ನವಗಿರೆ (46) ಜತೆ 2ನೇ ವಿಕೆಟ್​ಗೆ 31 ಎಸೆತಗಳಲ್ಲೇ 71 ರನ್​ ದೋಚಿದರು. ಇನಿಂಗ್ಸ್​ನ ಕೊನೇ ಎಸೆತದಲ್ಲಿ ಶತಕಕ್ಕೆ 2 ರನ್​ ಗಳಿಸಬೇಕಾಗಿದ್ದ ವೋಲ್​ 1 ರನ್​ ಗಳಿಸಲಷ್ಟೇ ಶಕ್ತರಾದರು. ಇದರಿಂದ ಡಬ್ಲ್ಯುಪಿಎಲ್​ ಇತಿಹಾಸದ ಮೊದಲ ಶತಕ ಸಾಧಕಿ ಎನಿಸುವ ಅವಕಾಶದಿಂದ ವಂಚಿತರಾದರು.

ಯುಪಿ ವಾರಿಯರ್ಸ್​: 5 ವಿಕೆಟ್​ಗೆ 225 (ಗ್ರೇಸ್​ 39, ವೋಲ್​ 99*, ಕಿರಣ್​ 46, ಹೆನ್ರಿ 19, ಎಕ್ಲೆಸ್ಟೋನ್​ 13, ವೇರ್​ಹ್ಯಾಂ 43ಕ್ಕೆ 2, ಚಾರ್ಲಿ ಡೀನ್​ 47ಕ್ಕೆ 1). ಆರ್​ಸಿಬಿ: 19.3 ಓವರ್​ಗಳಲ್ಲಿ 213 (ಸ್ಮೃತಿ 4, ಮೇನಾ 27, ಪೆರ್ರಿ 28, ರಾವಿ 14, ರಿಚಾ 69, ವೇರ್​ಹ್ಯಾಂ 17, ಸ್ನೇಹಾ 26, ದೀಪ್ತಿ 50ಕ್ಕೆ 3, ಎಕ್ಲೆಸ್ಟೋನ್​ 25ಕ್ಕೆ 3, ಹೆನ್ರಿ 39ಕ್ಕೆ 2).