ಕ್ರೀಡೆ

WPL-2025: ಇಂದು ಮುಂಬೈ ಇಂಡಿಯನ್ಸ್-ಗುಜರಾತ್​ ಜೈಂಟ್ಸ್​ ಎಲಿಮಿನೇಟರ್​ ವಾರ್​; ಯಾರಿಗೆ ಗೆಲುವಿನ ಹೋಳಿ?

ಮುಂಬೈ: ನೇರವಾಗಿ ಫೈನಲ್​ಗೇರುವ ಅವಕಾಶದಿಂದ ವಂಚಿತವಾಗಿರುವ ಮಾಜಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಮತ್ತು ಇದೇ ಮೊದಲ ಬಾರಿಗೆ ಪ್ಲೇಆಫ್​ ಹಂತಕ್ಕೇರಿರುವ ಗುಜರಾತ್​ ಜೈಂಟ್ಸ್​ ತಂಡಗಳು ಮೂರನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಗುರುವಾರ "ಸೆಮಿಫೈನಲ್​' ಮಾದರಿಯ ಎಲಿಮಿನೇಟರ್​ ಪಂದ್ಯದಲ್ಲಿ ಸೆಣಸಲಿವೆ. ಗೆದ್ದ ತಂಡಕ್ಕೆ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್​ ಎದುರು ಪ್ರಶಸ್ತಿಗಾಗಿ ಹೋರಾಡುವ ಅವಕಾಶ ಲಭಿಸಲಿದೆ.

ಕಳೆದೆರಡು ಆವೃತ್ತಿಗಳಲ್ಲೂ ಎಲಿಮಿನೇಟರ್​ ಪಂದ್ಯದಲ್ಲಿ ಆಡಿದ್ದ ಹರ್ಮಾನ್​ಪ್ರೀತ್​ ಕೌರ್​ ಪಡೆ ಈ ಪೈಕಿ ಚೊಚ್ಚಲ ಆವೃತ್ತಿಯಲ್ಲಿ ಎಲಿಮಿನೇಟರ್​ನಲ್ಲಿ ಗೆದ್ದು ಬಳಿಕ ಫೈನಲ್​ನಲ್ಲೂ ಯಶಸ್ಸು ಸಾಧಿಸುವ ಮೂಲಕ ಪ್ರಶಸ್ತಿ ಗೆದ್ದಿತ್ತು. ಅದೇ ಸಾಧನೆಯನ್ನು ಈ ಸಲವೂ ಮರುಕಳಿಸುವ ಹಂಬಲ ಮುಂಬೈ ಇಂಡಿಯನ್ಸ್​ ತಂಡದ್ದಾಗಿದೆ.

ಮತ್ತೊಂದೆಡೆ ಗುಜರಾತ್​ ಜೈಂಟ್ಸ್​ ತಂಡ ಈ ಬಾರಿ ನಾಯಕತ್ವ ಬದಲಾವಣೆಯಿಂದ ಮೊದಲ ಬಾರಿ ಪ್ಲೇಆಫ್​​ಗೇರುವ ಅದೃಷ್ಟ ಪಡೆದಿದ್ದು, ಅನುಭವಿ ಆಶ್ಲೆ ಗಾರ್ಡ್​ನರ್​ ಸಾರಥ್ಯದಲ್ಲಿ ಮೊದಲ ಬಾರಿ ಪ್ರಶಸ್ತಿ ಸುತ್ತಿಗೇರಿದ ಸಾಧನೆಯನ್ನೂ ಮಾಡುವ ಹಂಬಲದಲ್ಲಿದೆ. ಆದರೆ ಗುಜರಾತ್​ ಎದುರು ಅಜೇಯ ದಾಖಲೆ ಹೊಂದಿರುವುದು ಮುಂಬೈಗೆ ಹೆಚ್ಚಿನ ಆತ್ಮವಿಶ್ವಾಸ ತುಂಬಲಿದೆ.

ಮುಂಬೈಗೆ ವಿದೇಶಿಯರ ಬಲ

ಮುಂಬೈಗೆ ವಿದೇಶಿ ಆಟಗಾರ್ತಿಯರಾದ ನ್ಯಾಟ್​ ಸೀವರ್​&ಬ್ರಂಟ್​ ಮತ್ತು ಹ್ಯಾಲಿ ಮ್ಯಾಥ್ಯೂಸ್​ ಆಲ್ರೌಂಡ್​ ಆಟ ಹಾಲಿ ಆವೃತ್ತಿಯಲ್ಲಿ ಹೆಚ್ಚಿನ ಬಲ ತುಂಬಿದೆ. ಸೀವರ್​ ಟೂರ್ನಿಯಲ್ಲಿ ಇದುವರೆಗೆ 4 ಅರ್ಧಶತಕಗಳ ಸಹಿತ ಸರ್ವಾಧಿಕ 416 ರನ್​ ಸಿಡಿಸಿದ್ದಾರೆ. ಜತೆಗೆ 8 ವಿಕೆಟ್​ ಕಬಳಿಸಿದ್ದಾರೆ. ಇನ್ನು ಮ್ಯಾಥ್ಯೂಸ್​ ಟೂರ್ನಿಯಲ್ಲಿ ಸರ್ವಾಧಿಕ 14 ವಿಕೆಟ್​ ಕಬಳಿಸಿದ್ದಾರೆ. ಜತೆಗೆ 227 ರನ್​ ಬಾರಿಸಿದ್ದಾರೆ. ಇನ್ನು ಕಿವೀಸ್​ ಸ್ಪಿನ್ನರ್​ ಅಮೆಲಿಯಾ ಕೆರ್​ ಕೂಡ 14 ವಿಕೆಟ್​ ಕಬಳಿಸಿದ್ದರೆ, ದಣ ಆಫ್ರಿಕಾದ ವೇಗಿ ಶಬ್ನಿಮ್​ ಇಸ್ಮಾಯಿಲ್​ 7 ವಿಕೆಟ್​ ಗಳಿಸಿದ್ದಾರೆ. ನಾಯಕ ಹರ್ಮಾನ್​ಪ್ರೀತ್​ ಅಸ್ಥಿರ ನಿರ್ವಹಣೆಯ ನಡುವೆಯೂ ಟೂರ್ನಿಯಲ್ಲಿ ಇದುವರೆಗೆ ಒಂದು ಅರ್ಧಶತಕ ಸಹಿತ 200 ರನ್​ ರನ್​ ಬಾರಿಸಿದ್ದಾರೆ. ಇನ್ನು ಅಮನ್​ಜೋತ್​ ಕೌರ್​ ಕೂಡ ಆಲ್ರೌಂಡ್​ ನಿರ್ವಹಣೆಯೊಂದಿಗೆ ಗಮನಸೆಳೆದಿದ್ದಾರೆ. ಭಾರತೀಯರಿಂದ ಇನ್ನಷ್ಟು ಕೊಡುಗೆ ಬಂದರೆ ಮುಂಬೈಗೆ ಫೈನಲ್​ಗೇರುವ ಅವಕಾಶ ಹೆಚ್ಚಲಿದೆ.

ಗುಜರಾತ್​ ಜೈಂಟ್ಸ್​ಗೆ ಶಕ್ತಿ ತುಂಬಿದ ಭಾರತೀಯರು

ದೇಶಬಾಂಧವೆ ಬೆನ್​ ಮೂನಿ ಅವರಿಂದ ನಾಯಕತ್ವವನ್ನು ಪಡೆದುಕೊಂಡ ಬಳಿಕ ಆಸೀಸ್​ ತಾರೆ ಗಾರ್ಡ್​ನರ್​ ಈ ಬಾರಿ ಗುಜರಾತ್​ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಜತೆಗೆ 235 ರನ್​ ಮತ್ತು 8 ವಿಕೆಟ್​ ಗಳಿಸುವ ಮೂಲಕ ಆಲ್ರೌಂಡ್​ ನಿರ್ವಹಣೆ ತೋರಿದ್ದಾರೆ. ಬೆತ್​ ಮೂನಿ (231 ರನ್​), ಡಿಯೇಂಡ್ರಾ ಡಾಟಿನ್​ (142 ರನ್​, 9 ವಿಕೆಟ್​) ಕೂಡ ಉತ್ತಮ ನಿರ್ವಹಣೆ ತೋರಿದ್ದಾರೆ. ಆದರೆ ಇದೆಲ್ಲಕ್ಕಿಂತ ಗುಜರಾತ್​ ತಂಡಕ್ಕೆ ಈ ಬಾರಿ ಭಾರತೀಯರ ಅತ್ಯುತ್ತಮ ನಿರ್ವಹಣೆ ಹೆಚ್ಚಿನ ಬಲ ತುಂಬಿದೆ. ಹರ್ಲೀನ್​ ಡಿಯೋಲ್​ (224 ರನ್​), ಭಾರತಿ ಫುಲ್​ಮಲಿ (103 ರನ್​) ಬ್ಯಾಟಿಂಗ್​ನಲ್ಲಿ ಸಾಥ್​ ನೀಡಿದ್ದರೆ, ಬೌಲಿಂಗ್​ನಲ್ಲಿ ಕಾಶ್ವಿ ಗೌತಮ್​ (10 ವಿಕೆಟ್​), ತನುಜಾ ಕನ್ವರ್​ (8 ವಿಕೆಟ್​), ಪ್ರಿಯಾ ಮಿಶ್ರಾ (6 ವಿಕೆಟ್​), ಮೇಘನಾ ಸಿಂಗ್​ (4 ವಿಕೆಟ್​) ಗಮನಸೆಳೆದಿದ್ದಾರೆ.

*ಆರಂಭ: ರಾತ್ರಿ 7.30

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

*ಮುಖಾಮುಖಿ: 6

ಮುಂಬೈ ಇಂಡಿಯನ್ಸ್​: 6

ಗುಜರಾತ್​ ಜೈಂಟ್ಸ್​: 0