ನವದೆಹಲಿ: ಐಪಿಎಲ್ ಹಬ್ಬದ ಬಳಿಕ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿರುವ ಭಾರತ ತಂಡ, ಟಿ20 ವಿಶ್ವಕಪ್‌ಗೆ ಮುನ್ನ ಬೆಂಚ್ ಸ್ಟ್ರೆಂತ್ ಪರೀಕ್ಷೆಗೆ ಸಜ್ಜಾಗಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಗುರುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸತತ 13 ಗೆಲುವಿನ ವಿಶ್ವದಾಖಲೆ ನಿರ್ಮಿಸುವತ್ತ ಕಣ್ಣಿಟ್ಟಿದೆ. ಈ ನಡುವೆ ಸರಣಿ ಆರಂಭಕ್ಕೆ ಮೊದಲೇ ಭಾರತಕ್ಕೆ ಆಘಾತವೊಂದು ಎದುರಾಗಿದ್ದು, ನಾಯಕ ಕೆಎಲ್ ರಾಹುಲ್ ಗಾಯದಿಂದಾಗಿ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಇದರಿಂದ ನಾಯಕತ್ವ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಹೆಗಲೇರಿದ್ದರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಬಡ್ತಿ ಪಡೆದಿದ್ದಾರೆ.
ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿರುವ ಜತೆಗೆ ಕನ್ನಡಿಗ ಕೆಎಲ್ ರಾಹುಲ್ ಅಲಭ್ಯತೆ ಭಾರತಕ್ಕೆ ಹೊಡೆತ ನೀಡಿದೆ. ಪಂತ್ ಯುವ-ಅನುಭವಿ ತಂಡವನ್ನು ಮುನ್ನಡೆಸಲಿದ್ದು, ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಗೆಲುವಿನ ಲಯ ಕಾಯ್ದುಕೊಳ್ಳುವ ನಿರೀಕ್ಷೆ ಇದೆ. 11 ದಿನಗಳ ಅಂತರದಲ್ಲಿ ನಡೆಯಲಿರುವ 5 ಪಂದ್ಯಗಳು, ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಿದ್ಧತೆಯ ದೃಷ್ಟಿಯಿಂದ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಐಪಿಎಲ್‌ನಲ್ಲಿ ಎದುರಾಳಿ ಅಥವಾ ಒಂದೇ ತಂಡದ ಆಟಗಾರರಾಗಿದ್ದವರು ಇದೀಗ ಹತ್ತೇ ದಿನಗಳ ಅಂತರದಲ್ಲಿ ಒಂದೇ ತಂಡ ಅಥವಾ ಎದುರಾಳಿ ತಂಡಗಳಲ್ಲಿ ಆಡುತ್ತಿರುವುದು ಗಮನಾರ್ಹ.
ಟೀಮ್ ನ್ಯೂಸ್:
ಭಾರತ: ರಾಹುಲ್ ಹೊರಬಿದ್ದ ಹಿನ್ನೆಲೆಯಲ್ಲಿ ಋತುರಾಜ್-ಇಶಾನ್ ಕಿಶನ್ ಇಬ್ಬರಿಗೂ ಇನಿಂಗ್ಸ್ ಆರಂಭಿಸುವ ಅವಕಾಶ ಲಭಿಸಿದೆ. ಈ ಮುನ್ನ ರಾಹುಲ್ ಜತೆ ಇನಿಂಗ್ಸ್ ಆರಂಭಿಸಲು ಇವರಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿತ್ತು. ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ 4ನೇ ಕ್ರಮಾಂಕದಲ್ಲಿ ಆಡಿದ್ದರೂ, ಟೀಮ್ ಇಂಡಿಯಾದಲ್ಲಿ ಫಿನಿಷರ್ ಪಾತ್ರವನ್ನೇ ನಿರ್ವಹಿಸಬೇಕಾಗಿದೆ. ಅವರಿಗೆ ದಿನೇಶ್ ಕಾರ್ತಿಕ್ ಕಂಪನಿ ನೀಡಬಹುದು. ವೇಗದ ಬೌಲಿಂಗ್ ವಿಭಾಗಕ್ಕೆ ಭುವನೇಶ್ವರ್ ಸಾರಥ್ಯ ವಹಿಸಲಿದ್ದು, ಹರ್ಷಲ್ ಪಟೇಲ್ 2ನೇ ವೇಗಿ ಆಗಬಹುದು. 3ನೇ ವೇಗಿ ಸ್ಥಾನಕ್ಕೆ ಆವೇಶ್ ಖಾನ್ ಮತ್ತು ಯಾರ್ಕರ್ ಸ್ಪೆಷಲಿಸ್ಟ್ ಅರ್ಷದೀಪ್ ನಡುವೆ ಸ್ಪರ್ಧೆ ಇದೆ. ಸೆನ್ಸೇಶನಲ್ ಸ್ಪೀಡ್ ಸ್ಟಾರ್ ಉಮ್ರಾನ್ ಮಲಿಕ್ ಮೊದಲ ಪಂದ್ಯಕ್ಕೆ 11ರ ಬಳಗದ ರೇಸ್‌ನಲ್ಲಿಲ್ಲ. ಸ್ಪಿನ್ನರ್‌ಗಳಲ್ಲಿ ಚಾಹಲ್‌ಗೆ ಸ್ಥಾನ ಖಚಿತವಿದ್ದರೆ, 2ನೇ ಸ್ಪಿನ್ನರ್ ಸ್ಥಾನಕ್ಕೆ ಅಕ್ಷರ್-ರವಿ ಬಿಷ್ಣೋಯಿ ನಡುವೆ ಪೈಪೋಟಿ ಇದೆ.
ಸಂಭಾವ್ಯ ತಂಡ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ, ವಿ.ಕೀ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್/ದೀಪಕ್ ಹೂಡಾ, ಅಕ್ಷರ್ ಪಟೇಲ್/ರವಿ ಬಿಷ್ಣೋಯಿ, ಭುವನೇಶ್ವರ್, ಹರ್ಷಲ್ ಪಟೇಲ್, ಆವೇಶ್ ಖಾನ್/ಅರ್ಷದೀಪ್ ಸಿಂಗ್, ಯಜುವೇಂದ್ರ ಚಾಹಲ್.
ದಕ್ಷಿಣ ಆಫ್ರಿಕಾ: ಬ್ಯಾಟಿಂಗ್ ವಿಭಾಗದ ಅಗ್ರ 5 ಕ್ರಮಾಂಕ ನಿಶ್ಚಿತವಾಗಿದ್ದು, 6ನೇ ಕ್ರಮಾಂಕಕ್ಕೆ ಹೆನ್ರಿಕ್ ಕ್ಲಾಸೆನ್ ಮತ್ತು ರೀಜಾ ಹೆಂಡ್ರಿಕ್ಸ್ ನಡುವೆ ಪೈಪೋಟಿ ಇದೆ. ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಲು ಬಯಸಿದರೆ ಕೇಶವ್ ಮಹಾರಾಜ್ ಕೂಡ ಕಣಕ್ಕಿಳಿಯಬಹುದು. ರಬಾಡ-ನೋಕಿಯ ಜತೆಗೆ ಮಾರ್ಕೋ ಜಾನ್ಸೆನ್ 3ನೇ ವೇಗಿ ಆಗಬಹುದು.
ಸಂಭಾವ್ಯ ತಂಡ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿಕಾಕ್ (ವಿ.ಕೀ), ರಸೀ ವಾನ್ ಡರ್ ಡುಸೆನ್, ಏಡನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ರೀಜಾ ಹೆಂಡ್ರಿಕ್ಸ್/ಹೆನ್ರಿಕ್ ಕ್ಲಾಸೆನ್, ಮಾರ್ಕೋ ಜಾನ್ಸೆನ್, ಡ್ವೇನ್ ಪ್ರಿಟೋರಿಯಸ್/ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನೋಕಿಯ, ತಬರೇಜ್ ಶಮ್ಸಿ.
ಪಂದ್ಯ ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಮುಖಾಮುಖಿ: 15
ಜಯ: 9
ಸೋಲು: 6
ಭಾರತದಲ್ಲಿ: 8
ಜಯ: 5
ಸೋಲು: 3
ದಿನೇಶ್ ಕಾರ್ತಿಕ್ ಅಂದು-ಇಂದೂ!
ಭಾರತ ತಂಡ 2006ರ ಡಿಸೆಂಬರ್ 1ರಂದು ಜೊಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ವಿರುದ್ಧವೇ ಚೊಚ್ಚಲ ಟಿ20 ಪಂದ್ಯ ಆಡಿತ್ತು. ಈಗಿನ ಟೀಮ್ ಇಂಡಿಯಾದಲ್ಲೂ ಇರುವ ಆಗಿನ ಏಕಮಾತ್ರ ಆಟಗಾರ ದಿನೇಶ್ ಕಾರ್ತಿಕ್! ಆ ಪಂದ್ಯದ ಕೊನೇ ಓವರ್‌ನಲ್ಲಿ 9 ರನ್ ಬೇಕಿದ್ದಾಗ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಭಾರತದ ಗೆಲುವಿನ ಹಾದಿ ಸುಗಮಗೊಳಿಸಿದ್ದ ಡಿಕೆ, ಈಗಲೂ ಫಿನಿಷರ್ ಪಾತ್ರವನ್ನು ನಿರ್ವಹಿಸಲು ತಂಡಕ್ಕೆ ಪುನರಾಗಮನ ಕಂಡಿರುವುದು ವಿಶೇಷವಾಗಿದೆ.
ವಿಶ್ವದಾಖಲೆ ಗೆಲುವಿನ ನಿರೀಕ್ಷೆ
ಭಾರತ ತಂಡ ಸರಣಿಯ ಮೊದಲ ಪಂದ್ಯ ಗೆದ್ದರೆ, ಟಿ20 ಕ್ರಿಕೆಟ್‌ನಲ್ಲಿ ಸರ್ವಾಧಿಕ ಸತತ ಗೆಲುವು ದಾಖಲಿಸಿದ ವಿಶ್ವದಾಖಲೆ ಬರೆಯಲಿದೆ. ಸದ್ಯ ಸತತ 12 ಜಯದೊಂದಿಗೆ ಅ್ಘಾನಿಸ್ತಾನ ಮತ್ತು ರೊಮೇನಿಯಾ ಜತೆಗೆ ಈ ವಿಶ್ವದಾಖಲೆ ಹಂಚಿಕೊಂಡಿದೆ. ಈ 12 ಗೆಲುವುಗಳ ಪೈಕಿ ಮೊದಲ 3 ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಬಂದಿದ್ದರೆ, ನಂತರದ 9 ಗೆಲುವುಗಳು ರೋಹಿತ್ ಶರ್ಮ ನಾಯಕತ್ವದಲ್ಲಿ ದಾಖಲಾಗಿವೆ. ಇದೀಗ ರಿಷಭ್ ಪಂತ್ ನೇತೃತ್ವದಲ್ಲಿ ಸತತ 13ನೇ ಗೆಲುವು ಒಲಿಸಿಕೊಳ್ಳುವ ಹಂಬಲದಲ್ಲಿದೆ.
ದಕ್ಷಿಣ ಆಫ್ರಿಕಾ ಸದೃಢ ದಾಖಲೆ
ದಕ್ಷಿಣ ಆಫ್ರಿಕಾ ತಂಡ ಕಳೆದ 12 ವರ್ಷಗಳಿಂದ ಭಾರತದಲ್ಲಿ ಸೀಮಿತ ಓವರ್ ಕ್ರಿಕೆಟ್ ಸರಣಿ ಸೋಲದ ಅಜೇಯ ದಾಖಲೆ ಹೊಂದಿದೆ. ಡೇವಿಡ್ ಮಿಲ್ಲರ್, ಕ್ವಿಂಟನ್ ಡಿಕಾಕ್, ಕಗಿಸೊ ರಬಾಡ ಸಹಿತ ಇತ್ತೀಚೆಗೆ ಐಪಿಎಲ್‌ನಲ್ಲಿ ಆಡಿದ 10 ಆಟಗಾರರು ದಕ್ಷಿಣ ಆಫ್ರಿಕಾ ತಂಡದಲ್ಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ತಬರೇಜ್ ಶಮ್ಸಿ ಮತ್ತು ಕೇಶವ್ ಮಹಾರಾಜ್ ತಂಡದ ಬಲ ಆಗಿದ್ದಾರೆ. ಹೀಗಾಗಿ ಟೆಂಬಾ ಬವುಮಾ ಬಳಗ ಭಾರತಕ್ಕೆ ಸವಾಲಾಗಲಿದೆ. ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿ ಚುಟುಕು ಕ್ರಿಕೆಟ್ ಪಂದ್ಯ ಆಡುತ್ತಿದ್ದು, ಭಾರತದಲ್ಲಿನ ಉತ್ತಮ ದಾಖಲೆ ಕಾಯ್ದುಕೊಳ್ಳುವ ಜತೆಗೆ ಆಸೀಸ್‌ನಲ್ಲಿ ನಡೆಯುವ ಈ ವರ್ಷದ ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವತ್ತ ಗಮನಹರಿಸಲಿದೆ.
*ದಾಖಲೆಯ ಬಗ್ಗೆ ಯೋಚಿಸಿಲ್ಲ. ಆ ಬಗ್ಗೆ ಗಮನವನ್ನೂ ಹರಿಸಿಲ್ಲ. ಪಂದ್ಯ ಗೆಲ್ಲುವುದು ಖುಷಿ ನೀಡುತ್ತದೆ. ನಾವು ಆಡುವ ಪ್ರತಿ ಪಂದ್ಯವನ್ನೂ ಗೆಲ್ಲಲು ಬಯಸುತ್ತೇವೆ. ಉತ್ತಮ ಸಿದ್ಧತೆ ಮತ್ತು ಅಭ್ಯಾಸ ನಡೆಸಲು ಬಯಸುತ್ತೇವೆ. ಕಾರ್ಯತಂತ್ರಗಳೊಂದಿಗೆ ಕಣಕ್ಕಿಳಿಯುತ್ತೇವೆ. ಅದು ಕಾರ್ಯಗತವಾದರೆ ಅದ್ಭುತಗಳು ನಿರ್ಮಾಣವಾಗುತ್ತವೆ.
|ರಾಹುಲ್ ದ್ರಾವಿಡ್, ಟೀಮ್ ಇಂಡಿಯಾ ಕೋಚ್
ರಾಹುಲ್, ಕುಲದೀಪ್ ಔಟ್
ಅಭ್ಯಾಸದ ವೇಳೆ ಗಾಯಗೊಂಡಿರುವ ಕೆಎಲ್ ರಾಹುಲ್ ಮತ್ತು ಕುಲದೀಪ್ ಯಾದವ್ ಸರಣಿಯಿಂದ ಹೊರಬಿದ್ದಿದ್ದಾರೆ. ರಾಹುಲ್‌ರ ತೊಡೆಸಂದು ಗಾಯ ಮರುಕಳಿಸಿದ್ದರೆ, ಕುಲದೀಪ್ ಬಲಗೈಗೆ ಚೆಂಡು ಬಡಿದು ಗಾಯವಾಗಿದೆ. ಇದರಿಂದ ರಿಷಭ್ ಪಂತ್ ನಾಯಕ ಮತ್ತು ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಬಡ್ತಿ ಪಡೆದಿದ್ದಾರೆ. ರಾಹುಲ್, ಕುಲದೀಪ್ ಇಬ್ಬರೂ ಇನ್ನು ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಚಿಕಿತ್ಸೆ ಪಡೆಯಲಿದ್ದಾರೆ.