ಬಾಕು (ಅಜರ್ಬೈಜಾನ್): ಭಾರತದ ಯುವ ಆಟಗಾರ ಆರ್. ಪ್ರಜ್ಞಾನಂದ ಚೆಸ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಂತದ ಮೊದಲ ಪಂದ್ಯದಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಡ್ರಾ ಸಾಧಿಸಿದ್ದಾರೆ. ಭಾನುವಾರ ಈ ಮುಖಾಮುಖಿಯ 2ನೇ ಪಂದ್ಯ ನಡೆಯಲಿದ್ದು, ಅದರಲ್ಲಿ ಗೆದ್ದರೆ ಪ್ರಜ್ಞಾನಂದ ಫೈನಲ್ ಪ್ರವೇಶಿಸಲಿದ್ದಾರೆ. 2ನೇ ಪಂದ್ಯವೂ ಡ್ರಾಗೊಂಡರೆ ಸೋಮವಾರ ಟೈಬ್ರೇಕರ್ ಕಾದಾಟ ನಡೆಯಲಿದೆ.
ದಿಗ್ಗಜ ವಿಶ್ವನಾಥನ್ ಆನಂದ್ ಬಳಿಕ ಟೂರ್ನಿಯ ಉಪಾಂತ್ಯದಲ್ಲಿ ಆಡುತ್ತಿರುವ ಮೊದಲ ಭಾರತೀಯರೆನಿಸಿರುವ 18 ವರ್ಷದ ಪ್ರಜ್ಞಾನಂದ, ವಿಶ್ವ ನಂ. 3 ಕರುವಾನಾಗೆ ನಿಕಟ ಪೈಪೋಟಿ ಒಡ್ಡಿ 78ನೇ ನಡೆಯ ಬಳಿಕ ಅಂಕ ಹಂಚಿಕೊಂಡರು.
ಇನ್ನೊಂದು ಸೆಮಿೈನಲ್ ಹಣಾಹಣಿಯ ಮೊದಲ ಪಂದ್ಯದಲ್ಲಿ ವಿಶ್ವ ನಂ. 1 ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್, ಆತಿಥೇಯ ದೇಶದ ನಿಜತ್ ಅಬಸೋವ್ ವಿರುದ್ಧ ಗೆಲುವು ದಾಖಲಿಸಿದರು.