ಕ್ರೀಡೆ

ಬಿಡಬ್ಲುಎಫ್ ವಿಶ್ವ ರ‍್ಯಾಂಕಿಂಗ್ ಮೂರು ಸ್ಥಾನ ಏರಿಕೆ ಕಂಡ ಪ್ರಣಯ್

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಒಲಿಸಿಕೊಂಡ ಭಾರತದ ಅಗ್ರ ಷಟ್ಲರ್ ಎಚ್‌ಎಸ್ ಪ್ರಣಯ್, ಬಿಡಬ್ಲುಎಫ್ ಪುರುಷರ ಸಿಂಗಲ್ಸ್ ವಿಭಾಗದ ವಿಶ್ವ ರ‌್ಯಾಂಕಿಂಗ್‌ನಲ್ಲಿ ಮೂರು ಸ್ಥಾನ ಏರಿಕೆ ಕಂಡು ಜೀವನಶ್ರೇಷ್ಠ ಸ್ಥಾನಕ್ಕೇರಿದ್ದಾರೆ.

ಮಂಗಳವಾರ ಬಿಡುಗಡೆಯಾದ ಪರಿಷ್ಕೃತ ರ‌್ಯಾಂಕಿಂಗ್‌ನಲ್ಲಿ 72,437 ಅಂಕ ಕಲೆಹಾಕುವ ಮೂಲಕ 31 ವರ್ಷದ ಪ್ರಣಯ್ ಮೊದಲ ಬಾರಿ ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಆಗ್ರ 10ರೊಳಗೆ ಸ್ಥಾನ ಪಡೆದಿರುವ ಏಕೈಕ ಭಾರತೀಯ ಷಟ್ಲರ್ ಎನಿಸಿದ್ದಾರೆ. ಯುವ ಷಟ್ಲರ್ ಲಕ್ಷ್ಯಸೇನ್ ಒಂದು ಸ್ಥಾನ ಕುಸಿತ ಕಂಡಿದ್ದು 12ನೇ ಸ್ಥಾನಕ್ಕೆ ಜಾರಿದ್ದಾರೆ. ಕಿಡಂಬಿ ಶ್ರೀಕಾಂತ್ 20ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನ ನಿರ್ಗಮನದ ನಡುವೆಯೂ ಒಂದು ಸ್ಥಾನದ ಏರಿಕೆಯೊಂದಿಗೆ ಅವಳಿ ಒಲಿಂಪಿಕ್ಸ್ ವಿಜೇತೆ ಪಿವಿ ಸಿಂಧು 14ನೇ ಸ್ಥಾನದಲ್ಲಿದ್ದಾರೆ. ಡಬಲ್ಸ್‌ನಲ್ಲಿ ತ್ರಿಸಾ ಜೋಲಿ- ಗಾಯತ್ರಿ ಗೋಪಿಚಂದ್ 17ನೇ ಸ್ಥಾನಕ್ಕೇರಿದ್ದಾರೆ.