ಮೆಲ್ಬೋರ್ನ್: ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್ ಸ್ಥಾನವನ್ನು ಈಗಾಗಲೆ ಖಚಿತಪಡಿಸಿಕೊಂಡಿರುವ ಭಾರತ ತಂಡ ಮಹಿಳೆಯರ ಟಿ20 ವಿಶ್ವಕಪ್ನಲ್ಲಿ ಅಜೇಯ ಓಟ ಮುಂದುವರಿಸುವತ್ತ ಗಮನಹರಿಸಿದೆ. ಶನಿವಾರ ನಡೆಯಲಿರುವ ಎ ಗುಂಪಿನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿರುವ ಹರ್ವನ್ಪ್ರೀತ್ ಕೌರ್ ಬಳಗ ಸತತ 4ನೇ ಗೆಲುವಿನ ಹಂಬಲದಲ್ಲಿದೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಮಾಜಿ ರನ್ನರ್ಅಪ್ ನ್ಯೂಜಿಲೆಂಡ್ ತಂಡಗಳನ್ನು ಹಿಮ್ಮೆಟ್ಟಿಸಿ ಬೀಗಿದ್ದರೂ ಭಾರತ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಾದ ಅಗತ್ಯವಿದೆ. ಯುವ ಬ್ಯಾಟುಗಾರ್ತಿ ಶೆಫಾಲಿ ವರ್ಮಳನ್ನೇ ಹೆಚ್ಚಾಗಿ ಅವಲಂಬಿಸಿರುವ ಭಾರತ ತಂಡ, ಅನುಭವಿ ಆಟಗಾರ್ತಿಯರಾದ ಸ್ಮೃತಿ ಮಂದನಾ, ಹರ್ವನ್ಪ್ರೀತ್ ಕೌರ್, ಕನ್ನಡತಿ ವೇದಾ ಕೃಷ್ಣಮೂರ್ತಿ ಅವರಿಂದಲೂ ಉಪಯುಕ್ತ ಕೊಡುಗೆಗಳನ್ನು ನಿರೀಕ್ಷಿಸುತ್ತಿದೆ. 16 ವರ್ಷದ ಶೆಫಾಲಿ 3 ಪಂದ್ಯಗಳಲ್ಲಿ 172.72ರ ಸ್ಟ್ರೈಕ್ರೇಟ್ನಲ್ಲಿ 114 ರನ್ ಪೇರಿಸಿದ್ದು, 8 ಸಿಕ್ಸರ್ಗಳನ್ನೂ ಸಿಡಿಸಿ ಗಮನ ಸೆಳೆದಿದ್ದಾರೆ. 29, 39, 46 ರನ್ಗಳ ಇನಿಂಗ್ಸ್ಅನ್ನು ಅವರೀಗ ದೊಡ್ಡ ಸ್ಕೋರ್ ಆಗಿ ಬದಲಾಯಿಸಬೇಕಾಗಿದೆ.
ಗೆದ್ದ 3 ಪಂದ್ಯಗಳಲ್ಲೂ ಬೌಲಿಂಗ್ ವಿಭಾಗವೇ ಭಾರತದ ಶಕ್ತಿ ಎನಿಸಿದೆ. ಅದರಲ್ಲೂ ಸ್ಪಿನ್ ಬೌಲರ್ಗಳು ತಂಡದ ಪ್ರಧಾನ ಅಸ್ತ್ರವೆನಿಸಿದೆ. ಪೂನಂ ಯಾದವ್ ವಿಕೆಟ್ ಬೇಟೆ ಮುಂದುವರಿಸಿದ್ದರೆ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಮತ್ತು ದೀಪ್ತಿ ಶರ್ಮ ಉತ್ತಮ ಸಾಥ್ ನೀಡುತ್ತಿದ್ದಾರೆ. ಅನುಭವಿ ವೇಗಿ ಶಿಖಾ ಪಾಂಡೆ ಕೂಡ ಉತ್ತಮ ಲಯದಲ್ಲಿದ್ದಾರೆ. -ಪಿಟಿಐ/ಏಜೆನ್ಸೀಸ್
ಪಂದ್ಯ ಆರಂಭ: ಬೆಳಗ್ಗೆ 9.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2
ರೇಸ್ನಲ್ಲಿಲ್ಲ ಶ್ರೀಲಂಕಾ
ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತಿರುವ ಶ್ರೀಲಂಕಾ ತಂಡ ಈಗಾಗಲೆ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ. ಹೀಗಾಗಿ ಭಾರತದೆದುರು ಕೆಚ್ಚೆದೆಯ ನಿರ್ವಹಣೆ ತೋರುವ ತವಕವನ್ನಷ್ಟೇ ಲಂಕಾ ಹೊಂದಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಕಿವೀಸ್ ಮತ್ತು ಆಸೀಸ್ ವಿರುದ್ಧ 130ರ ಗಡಿ ದಾಟುವಲ್ಲಿ ಸಫಲವಾಗಿರದ ಲಂಕಾ, ಆಸೀಸ್ ತಂಡದ ಚೇಸಿಂಗ್ಗೆ ಕೊನೇ ಓವರ್ವರೆಗೆ ಶ್ರಮಿಸುವಂತೆ ಮಾಡಿದ್ದು ಗಮನಾರ್ಹ ನಿರ್ವಹಣೆ. 41 ಮತ್ತು 50 ರನ್ಗಳ 2 ಉತ್ತಮ ಇನಿಂಗ್ಸ್ಗಳಿಂದ ಗಮನಸೆಳೆದಿರುವ ಲಂಕಾ ನಾಯಕಿ ಚಾಮರಿ ಅಟಪಟ್ಟು ಅಪಾಯಕಾರಿ ಆಗದಂತೆ ಭಾರತ ಎಚ್ಚರಿಕೆ ವಹಿಸಬೇಕಾಗಿದೆ.
ಯಾರನ್ನೂ ಲಘುವಾಗಿ ಪರಿಗಣಿಸುವುದಿಲ್ಲ
ಹ್ಯಾಟ್ರಿಕ್ ಗೆಲುವು ಕಂಡ ವಿಶ್ವಾಸವಿದ್ದರೂ, ಸಾಧಾರಣ ಬಲದ ಶ್ರೀಲಂಕಾ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಭಾರತ ತಂಡದ ನಾಯಕಿ ಹರ್ವನ್ಪ್ರೀತ್ ಕೌರ್ ಹೇಳಿದ್ದಾರೆ. ಲಂಕಾ ತಂಡವನ್ನು ಗಂಭೀರವಾಗಿಯೇ ಎದುರಿಸಲಿದ್ದು, ಈ ಪಂದ್ಯದ ಬಳಿಕವಷ್ಟೇ ಸೆಮಿಫೈನಲ್ ಪಂದ್ಯದತ್ತ ಗಮನಹರಿಸಲಿದ್ದೇವೆ ಎಂದು ಹರ್ವನ್ಪ್ರೀತ್ ಹೇಳಿದ್ದಾರೆ.