ಕ್ರೀಡೆ

ಮಹಿಳಾ ಟಿ20 ವಿಶ್ವಕಪ್​: ಇಂದು ದ. ಆಫ್ರಿಕಾ-ಕಿವೀಸ್​ ಪ್ರಶಸ್ತಿ ಕದನ; ಯಾರೇ ಗೆದ್ದರೂ ಚೊಚ್ಚಲ ಕಿರೀಟ!

ದುಬೈ: ಅನುಭವಿ ಮತ್ತು ಯುವ ಆಟಗಾರ್ತಿಯರ ಆಲ್ರೌಂಡ್​ ಆಟದ ಬಲದಿಂದ ಬೀಗುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್​ ತಂಡಗಳು 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಭಾನುವಾರ ಪ್ರಶಸ್ತಿ ಸುತ್ತಿನ ಹೋರಾಟ ನಡೆಸಲಿವೆ. ಉಭಯ ತಂಡಗಳಲ್ಲಿ ಯಾವುದೆ ತಂಡ ಗೆದ್ದರೂ, ಮೊಟ್ಟಮೊದಲ ಬಾರಿಗೆ ಚಾಂಪಿಯನ್​ ಪಟ್ಟವೇರಿದ ಸಾಧನೆ ಮಾಡಲಿದೆ.

ನ್ಯೂಜಿಲೆಂಡ್​ ತಂಡ ಸೋಫಿ ಡಿವೈನ್​ ಅವರ ಅನುಭವಿ ನಾಯಕತ್ವ ಹೊಂದಿದ್ದರೆ, ದ. ಆಫ್ರಿಕಾ ಲೌರಾ ವೊಲ್ವಾರ್ಡ್​ ಅವರ ಉತ್ಸಾಹಿ ಸಾರಥ್ಯವನ್ನು ಹೊಂದಿದೆ. ಟೂರ್ನಿಗೆ ಮುನ್ನ ಸತತ 10 ಪಂದ್ಯ ಸೋತಿದ್ದ ಕಿವೀಸ್​ ಈಗ ಫೈನಲ್​ಗೇರಿರುವುದೇ ರೋಚಕ ಹಾದಿಯಾಗಿದ್ದರೆ, ದ. ಆಫ್ರಿಕಾ ಕಳೆದ ಆವೃತ್ತಿಯ ಫೈನಲ್​ ನಿರಾಸೆಯನ್ನು ನೀಗಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. 2023ರಲ್ಲಿ ತವರಿನಲ್ಲೇ ನಡೆದ ವಿಶ್ವಕಪ್​ನ ಫೈನಲ್​ನಲ್ಲಿ ಆಸೀಸ್​ ವಿರುದ್ಧ ಸೋತಿದ್ದ ದ. ಆಫ್ರಿಕಾ ಈ ಬಾರಿ ಸೆಮೀಸ್​ನಲ್ಲೇ ಸೇಡು ತೀರಿಸಿಕೊಂಡ ವಿಶ್ವಾಸದಲ್ಲಿದೆ.

ಕಿವೀಸ್​ 3ನೇ ಬಾರಿ ಮತ್ತು 14 ವರ್ಷಗಳ ಬಳಿಕ ಫೈನಲ್​ಗೇರಿದೆ. ಈ ಮುನ್ನ 2009, 2010ರಲ್ಲಿ ಫೈನಲ್​ಗೇರಿದಾಗ ಇಂಗ್ಲೆಂಡ್​, ಆಸೀಸ್​ ಎದುರು ಸೋತಿದ್ದ ಕಿವೀಸ್​, ಈ ಬಾರಿ 3ನೇ ಪ್ರಯತ್ನದಲ್ಲಿ ಟ್ರೋಫಿ ಗೆಲ್ಲುವ ಹಂಬಲದಲ್ಲಿದೆ.

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

*1: ಮಹಿಳೆಯರ ಏಕದಿನ ಅಥವಾ ಟಿ20 ವಿಶ್ವಕಪ್​ಗಳಲ್ಲಿ ಆಸ್ಟ್ರೆಲಿಯಾ ಅಥವಾ ಇಂಗ್ಲೆಂಡ್​ ತಂಡಗಳಿಲ್ಲದ ಮೊದಲ ಫೈನಲ್​ ಇದಾಗಿದೆ. 12 ಏಕದಿನ ವಿಶ್ವಕಪ್​ ಮತ್ತು ಹಿಂದಿನ 8 ಟಿ20 ವಿಶ್ವಕಪ್​ಗಳ ಫೈನಲ್​ನಲ್ಲೂ ಆಸೀಸ್​ ಅಥವಾ ಇಂಗ್ಲೆಂಡ್​ (8 ಬಾರಿ ಎರಡೂ ಆಡಿವೆ) ಆಡಿತ್ತು.

ಪುರುಷರ ವಿಶ್ವಕಪ್​ ನಿರಾಸೆ ಅಳಿಸುವರೇ ಮಹಿಳೆಯರು?

ಹಾಲಿ ವರ್ಷ ವೆಸ್ಟ್​ ಇಂಡೀಸ್​-ಅಮೆರಿಕದಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್​ನಲ್ಲೂ ಫೈನಲ್​ಗೇರಿದ್ದ ದ. ಆಫ್ರಿಕಾ ತಂಡ ಭಾರತದ ವಿರುದ್ಧ 7 ರನ್​ಗಳಿಂದ ಸೋತು ರನ್ನರ್​ಅಪ್​ಗೆ ತೃಪ್ತಿಪಟ್ಟಿತ್ತು. ಈ ನಿರಾಸೆಯನ್ನು ಅಳಿಸುವ ಅವಕಾಶವೀಗ ದ. ಆಫ್ರಿಕಾದ ಮಹಿಳೆಯರ ಮುಂದಿದೆ. ನ್ಯೂಜಿಲೆಂಡ್​ ಪುರುಷರೂ ಟಿ20 ವಿಶ್ವಕಪ್​ನಲ್ಲಿ ಒಮ್ಮೆ (2021) ಫೈನಲ್​ಗೇರಿದ್ದರೂ ನಿರಾಸೆ ಅನುಭವಿಸಿದ್ದರು. ಹೀಗಾಗಿ ಈಗ ಕಿವೀಸ್​ ಮಹಿಳೆಯರಿಗೂ ಪುರುಷರಿಗಿಂತ ಮುನ್ನ ಟಿ20 ವಿಶ್ವಕಪ್​ ಗೆಲುವಿನ ಸಾಧನೆ ಯ ಅವಕಾಶವಿದೆ.

*3: ನ್ಯೂಜಿಲೆಂಡ್​ ಗೆದ್ದರೆ ಮಹಿಳೆಯರ ಏಕದಿನ-ಟಿ20 ವಿಶ್ವಕಪ್​ ಎರಡೂ ಗೆದ್ದ 3ನೇ ತಂಡವೆನಿಸಲಿದೆ. ಆಸೀಸ್​, ಇಂಗ್ಲೆಂಡ್​ ಮೊದಲೆರಡು ತಂಡಗಳಾಗಿವೆ. ಕಿವೀಸ್​ 2000ದಲ್ಲಿ ಮಹಿಳಾ ಏಕದಿನ ವಿಶ್ವಕಪ್​ ಗೆದ್ದಿತ್ತು.