ಕ್ರೀಡೆ

ಕಿವೀಸ್, ವಿಂಡೀಸ್​ಗೆ ಜಯ

ಪರ್ತ್: ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ತಂಡಗಳು ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಕಂಡಿವೆ. ವಾಕಾ ಮೈದಾನದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ 2016ರ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ 7 ವಿಕೆಟ್​ಗಳಿಂದ ಚೊಚ್ಚಲ ಬಾರಿಗೆ ವಿಶ್ವಕಪ್ ಆಡುತ್ತಿರುವ ಥಾಯ್ಲೆಂಡ್ ಎದುರು ಜಯ ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಥಾಯ್ಲೆಂಡ್ 9 ವಿಕೆಟ್​ಗೆ 78 ರನ್​ಗಳಿಸಿದರೆ, ಪ್ರತಿಯಾಗಿ ವೆಸ್ಟ್ ಇಂಡೀಸ್ 16.4 ಓವರ್​ಗಳಲ್ಲಿ 3 ವಿಕೆಟ್​ಗೆ 80 ರನ್ ಗಳಿಸಿ ಜಯದ ನಗೆ ಬೀರಿತು. ಟೂರ್ನಿಯಲ್ಲಿ ಅತಿ ಕಡಿಮೆ ರ್ಯಾಂಕ್ ಹೊಂದಿರುವ ಥಾಯ್ಲೆಂಡ್ ಪ್ರತಿಷ್ಠಿತ ಟೂರ್ನಿಯ ಮೊದಲ ಪಂದ್ಯದಲ್ಲೆ ಕುಸಿತ ಅನುಭವಿಸಿತು. ಅನನುಭವಿ ಥಾಯ್ಲೆಂಡ್ ತಂಡ ಕೇವಲ 32 ರನ್ ಅಂತರದಲ್ಲಿ ಕಡೇ 7 ವಿಕೆಟ್ ಕಳೆದುಕೊಂಡಿತು.

ನ್ಯೂಜಿಲೆಂಡ್​ಗೆ ಸುಲಭ ಜಯ: ಇದೇ ಮೈದಾನದಲ್ಲಿ ನಡೆದ ಮತ್ತೊಂದು ನ್ಯೂಜಿಲೆಂಡ್ ತಂಡ 7 ವಿಕೆಟ್​ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 7 ವಿಕೆಟ್​ಗೆ 127 ರನ್ ಪೇರಿಸಿತು. ಪ್ರತಿಯಾಗಿ ನ್ಯೂಜಿಲೆಂಡ್ ತಂಡ ನಾಯಕಿ ಸೋಫಿ ಡಿವೈನ್ (75 ರನ್, 55 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಮ್ಯಾಡಿ ಗ್ರೀನ್ (29ರನ್, 20 ಎಸೆತ, 2 ಬೌಂಡರಿ, 1 ಸಿಕ್ಸರ್) ಜೋಡಿ 3ನೇ ವಿಕೆಟ್​ಗೆ 61 ರನ್ ಪೇರಿಸಿದ ಫಲವಾಗಿ 17.4 ಓವರ್​ಗಳಲ್ಲಿ 3 ವಿಕೆಟ್​ಗೆ 131 ರನ್ ಗಳಿಸಿ ಜಯದ ನಗೆ ಬೀರಿತು.

ಇಂದಿನ ಪಂದ್ಯ

ಇಗ್ಲೆಂಡ್-ದಕ್ಷಿಣ ಆಫ್ರಿಕಾ

ಆರಂಭ: ಸಂ.4.30

ಎಲ್ಲಿ: ವಾಕಾ ಮೈದಾನ, ಪರ್ತ್