ಕ್ರೀಡೆ

ಬಾಂಗ್ಲಾವನ್ನೂ ಬೇಟೆಯಾಡಿದ ಭಾರತ: ಶೆಫಾಲಿ ಸ್ಪೋಟಕ ಬ್ಯಾಟಿಂಗ್ ಸಾಹಸ, ಸತತ 2ನೇ ಜಯ ಕಂಡ ಹರ್ವನ್​ಪ್ರೀತ್ ಪಡೆ

ಪರ್ತ್: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮರ್ಥ ನಿರ್ವಹಣೆ ತೋರಿದ ಭಾರತ ತಂಡ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ 2ನೇ ಜಯ ದಾಖಲಿಸಿತು. ಡಬ್ಲ್ಯುಎಸಿಎ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಹರ್ವನ್ ಪ್ರೀತ್ ಕೌರ್ ಪಡೆ 18 ರನ್​ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿತು. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ್ದ ಭಾರತ, ಎ ಗುಂಪಿನಲ್ಲಿ ಅಗ್ರಸ್ಥಾನ ಸಂಪಾದಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಯುವ ಬ್ಯಾಟುಗಾರ್ತಿ ಶೆಫಾಲಿ ವರ್ಮ (39 ರನ್, 17 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ಜೆಮೀಮಾ ರೋಡ್ರಿಗಸ್ (34 ರನ್, 37 ಎಸೆತ, 2 ಬೌಂಡರಿ, 1 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್​ಗೆ 142 ರನ್ ಕಲೆಹಾಕಿತು. ಪ್ರತಿಯಾಗಿ ಬಾಂಗ್ಲಾದೇಶ ತಂಡ, ಪೂನಂ ಯಾದವ್ (18ಕ್ಕೆ 3), ಶಿಖಾ ಪಾಂಡೆ (14ಕ್ಕೆ 2) ಹಾಗೂ ಅರುಂಧತಿ ರೆಡ್ಡಿ (33ಕ್ಕೆ 2) ಮಾರಕ ದಾಳಿಗೆ ನಲುಗಿ 8 ವಿಕೆಟ್​ಗೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಏಜೆನ್ಸೀಸ್

ಶೆಫಾಲಿ-ಜೆಮೀಮಾ ಮಿಂಚಿನ ಬ್ಯಾಟಿಂಗ್

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಸೆಹ್ವಾಗ್ ಶೈಲಿಯ ಆಕ್ರಮಣಕಾರಿ ಬ್ಯಾಟುಗಾರ್ತಿ ಶೆಫಾಲಿ ವರ್ಮ ಬಿರುಸಿನ ಆರಂಭ ನೀಡಿದರು. ಮೊದಲ ಓವರ್​ನ 5ನೇ ಎಸೆತದಲ್ಲಿ ಹಾಗೂ 2ನೇ ಓವರ್​ನ 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಶೆಫಾಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಮತ್ತೊಂದು ತುದಿಯಲ್ಲಿದ್ದ ತಾನಿಯಾ ಭಾಟಿಯಾ (2) ಇನಿಂಗ್ಸ್​ನ 2ನೇ ಓವರ್​ನಲ್ಲೇ ನಿರ್ಗಮಿಸಿದರು. ನಾಯಕಿ ಸಲ್ಮಾ ಖತುನ್ ಎಸೆತದಲ್ಲಿ ಮುನ್ನುಗ್ಗಿ ಆಡಲು ಯತ್ನಿಸಿದ ತಾನಿಯಾ ಸ್ಟಂಪ್ ಔಟ್ ಆದರು. ಬಳಿಕ ಶೆಫಾಲಿ-ಜೆಮೀಮಾ ರೋಡ್ರಿಗಸ್ ಜೋಡಿ ಪ್ರತಿ ಓವರ್​ಗೆ ಸರಾಸರಿ 10ರಂತೆ ರನ್ ಪೇರಿಸಿತು. ಆಕರ್ಷಕ 4 ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದ ಶೆಫಾಲಿ ಪವರ್​ಪ್ಲೇನಲ್ಲಿ ಮೊತ್ತ ಹಿಗ್ಗಿಸಲು ನೆರವಾದರು. ಇನಿಂಗ್ಸ್​ನ 6ನೇ ಓವರ್ ಎಸೆದ ಪನ್ನಾ ಘೋಷ್​ರ ಮೊದಲ ಎಸೆತವನ್ನು ಸಿಕ್ಸರ್ ಅಟ್ಟಿದ ಶೆಫಾಲಿ, 3ನೇ ಎಸೆತವನ್ನು ಮತ್ತೆ ಸಿಕ್ಸರ್​ಗೆ ಅಟ್ಟಲು ಯತ್ನಿಸಿ ಎಕ್ಸ್​ಟ್ರಾ ಕವರ್​ನಲ್ಲಿದ್ದ ಶಮಿಮಾ ಸುಲ್ತಾನಾಗೆ ಕ್ಯಾಚ್ ನೀಡಿದರು. 2ನೇ ವಿಕೆಟ್​ಗೆ ಬಿರುಸಿನ 37 ರನ್ ಪೇರಿ ಸಿದರು. ಇದರೊಂದಿಗೆ ಭಾರತದ ರನ್​ವೇಗಕ್ಕೂ ಬಾಂಗ್ಲಾ ಬೌಲರ್​ಗಳು ಕಡಿವಾಣ ಹಾಕಿದರು.

ಶಿಖಾ, ಪೂನಂ ಕಡಿವಾಣ

ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಬಾಂಗ್ಲಾ ತಂಡಕ್ಕೆ ಅನುಭವಿ ವೇಗಿ ಶಿಖಾ ಪಾಂಡೆ ಆಘಾತ ನೀಡಿದರು. ಮುಶಿದ್ ಖತುನ್ (30 ರನ್, 26 ಎಸೆತ, 4 ಬೌಂಡರಿ), ನಿಗರ್ ಸುಲ್ತಾನಾ (30ರನ್, 26 ಎಸೆತ, 5 ಬೌಂಡರಿ) ಜೋಡಿಯ ಪ್ರತಿಹೋರಾಟದ ನಡುವೆಯೂ ಭಾರತದ ಬೌಲಿಂಗ್ ಪಡೆ, ಬಾಂಗ್ಲಾ ಬ್ಯಾಟುಗಾರ್ತಿಯರಿಗೆ ಕಡಿವಾಣ ಹಾಕಿತು. ಪೂನಂ ಯಾದವ್ ಹಾಗೂ ಅರುಂಧತಿ ರೆಡ್ಡಿ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ (25ಕ್ಕೆ 1) ಒಳಗೊಂಡ ಬೌಲಿಂಗ್ ಪಡೆ ಬಾಂಗ್ಲಾ ತಂಡವನ್ನು ಕಟ್ಟಿಹಾಕಿತು.

16 ವರ್ಷ, 27 ದಿನ ವಯಸ್ಸಿನ ಶೆಫಾಲಿ ವರ್ಮ ಟಿ20 ವಿಶ್ವಕಪ್​ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಕಿರಿಯರೆನಿಸಿದರು.

ವಿಶ್ವಕಪ್​ಗೆ ರಿಚಾ ಪದಾರ್ಪಣೆ

ಬಂಗಾಳದ 16 ವರ್ಷದ ಆಟಗಾರ್ತಿ ರಿಚಾ ಘೋಷ್ ಟಿ20 ವಿಶ್ವಕಪ್ ಟೂರ್ನಿಗೆ ಪದಾರ್ಪಣೆ ಮಾಡಿದರು. ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ರಿಚಾ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರು.