ಮುಂಬೈ: ಮುಂಬರುವ ಮೂರನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಮಹಿಳಾ ಟಿ20 ಟೂರ್ನಿಯನ್ನು ನಾಲ್ಕು ನಗರಗಳಾದ ಬೆಂಗಳೂರು, ವಡೋದರ, ಮುಂಬೈ ಮತ್ತು ಲಖನೌದಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಫೆಬ್ರವರಿ ಮೊದಲ ವಾರದಲ್ಲಿ ಟೂರ್ನಿ ಶುರುವಾಗಲಿದೆ.
ಮುಂಬೈ ನಗರದಲ್ಲಿನ ಪಂದ್ಯಗಳು ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿವೆ. ವಡೋದರದ ನೂತನ ಕೋಟಂಬಿ ಸ್ಟೇಡಿಯಂನಲ್ಲಿ ಮಾರ್ಚ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದರು. 2023ರ ಮೊದಲ ಆವೃತ್ತಿ ಮುಂಬೈನಲ್ಲಷ್ಟೇ ನಡೆದಿದ್ದರೆ, ಕಳೆದ ವರ್ಷದ ಡಬ್ಲ್ಯುಪಿಎಲ್ ಪಂದ್ಯಗಳು ಬೆಂಗಳೂರು-ದೆಹಲಿಯಲ್ಲಿ ಮಾತ್ರ ನಡೆದಿದ್ದವು. ಈ ಬಾರಿ ಟೂರ್ನಿಯನ್ನು 4 ನಗರಗಳಿಗೆ ವಿಸ್ತರಿಸಲಾಗಿದೆ.
ಈ ಬಾರಿ ಲಖನೌ, ವಡೋದರದಲ್ಲಿ ಮಾತ್ರ ಡಬ್ಲ್ಯುಪಿಎಲ್ ನಡೆಸಲು ಮೊದಲಿಗೆ ನಿರ್ಧರಿಸಿದ್ದರೂ, ಮುಂಬೈ, ಬೆಂಗಳೂರಿನಲ್ಲಿನ ಉತ್ಸಾಹಿ ಕ್ರಿಕೆಟ್ ಪ್ರೇಮಿಗಳನ್ನು ಗಮನದಲ್ಲಿಟ್ಟುಕೊಂಡು ಇವೆರಡು ಮೆಟ್ರೋ ನಗರಗಳಲ್ಲೂ ಪಂದ್ಯಗಳನ್ನು ನಡೆಸಲು ಭಾನುವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.