ಕ್ರೀಡೆ

Women’s Asia Cup 2024: ಅಜೇಯವಾಗಿ ಸೆಮಿಫೈನಲ್​ಗೇರಿದ ಭಾರತ

ಡಂಬುಲಾ: ಶೆಫಾಲಿ ವರ್ಮ (81 ರನ್​, 48 ಎಸೆತ, 12 ಬೌಂಡರಿ, 1 ಸಿಕ್ಸರ್) ಅಬ್ಬರ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಮಹಿಳೆಯರ ಟಿ20 ಏಷ್ಯಾಕಪ್ ಟೂರ್ನಿಯಲ್ಲಿ ನೇಪಾಳ ವಿರುದ್ಧ 82 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಹ್ಯಾಟ್ರಿಕ್ ಗೆಲುವಿನೊಂದಿಗೆ ಎ ಗುಂಪಿನ ಅಗ್ರಸ್ಥಾನಿಯಾಗಿ ಸೆಮಿಫೈನಲ್​ಗೇರಿದೆ. ಕಾಯಂ ನಾಯಕಿ ಹರ್ಮಾನ್ ಪ್ರೀತ್​ ಸಿಂಗ್ ಬದಲಿಗೆ ಸ್ಮೃತಿ ಮಂದನಾ ಹಂಗಾಮಿಯಾಗಿ ತಂಡವನ್ನು ಮುನ್ನಡೆಸಿದರು.

ಇಲ್ಲಿನ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಟೀಂ ಇಂಡಿಯಾ ಆರಂಭಿಕ ಆಟಗಾರ್ತಿಯಾದ ದಯಾಳನ್‌ ಹೇಮಲತಾ(47) ಮತ್ತು ಶಫಾಲಿ ವರ್ಮಾ ಅವರ ಬಿರುಸಿನ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 178 ರನ್​ ಕಲೆ ಹಾಕಿತು.

ಗುರಿ ಬೆನ್ನಟ್ಟಿದ ನೇಪಾಳ ಆರಂಭದಲ್ಲೇ ಸತತವಾಗಿ ವಿಕೆಟ್​ ಕಳೆದುಕೊಂಡು ಅಂತಿಮವಾಗಿ 9 ವಿಕೆಟ್​ಗೆ 96 ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಕಮಾಲ್ ಮಾಡಿದ ದೀಪ್ತಿ ಶರ್ಮಾ 4 ಓವರ್​ಗಳಲ್ಲಿ 13 ರನ್ ನೀಡಿ 3 ವಿಕೆಟ್ ಪಡೆದರು. ಅದೇ ಸಮಯದಲ್ಲಿ ಅರುಂಧತಿ ರೆಡ್ಡಿ ಮತ್ತು ರಾಧಾ ಯಾದವ್ ತಲಾ 2 ವಿಕೆಟ್ ಪಡೆದರು.