ಕ್ರೀಡೆ

ಇಂದು 2ನೇ ಆವೃತ್ತಿ ಡಬ್ಲ್ಯುಪಿಎಲ್ ಮಿನಿ ಹರಾಜು ಪ್ರಕ್ರಿಯೆ: ಯಾರ ಪಾಲಿಗೆ ಜಾಕ್‌ಪಾಟ್, 165 ಮಹಿಳಾ ಕ್ರಿಕೆಟಿಗರು ಹೆಸರು ನೋಂದಣಿ

ಮುಂಬೈ: ‘ಮಹಿಳಾ ಐಪಿಎಲ್’ ಎಂದೇ ಖ್ಯಾತವಾಗಿರುವ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಗೆ ಶನಿವಾರ ಮುಂಬೈ ನಗರದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, 104 ಭಾರತೀಯರು ಮತ್ತು 61 ವಿದೇಶೀಯರ ಸಹಿತ 165 ಮಹಿಳಾ ಕ್ರಿಕೆಟಿಗರು ಹರಾಜು ಪ್ರಕ್ರಿಯೆಗೆ ಒಳಪಡಲಿದ್ದು, ಈ ಬಾರಿ ಯಾರು ದುಬಾರಿ ಆಟಗಾರ್ತಿ ಎನಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಮೊದಲ ಆವೃತ್ತಿಯ ಹರಾಜು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟಿದ್ದ ಮಲ್ಲಿಕಾ ಸಾಗರ್, ಈ ಬಾರಿಯೂ ಹರಾಜು ಪ್ರಕ್ರಿಯೆ ನಡೆಸಲಿದ್ದಾರೆ.

ಟೂರ್ನಿಯಲ್ಲಿ ಆಡುವ 5 ತಂಡಗಳು ಈಗಾಗಲೆ 21 ವಿದೇಶೀಯರ ಸಹಿತ 60 ಆಟಗಾರ್ತಿಯರನ್ನು ರಿಟೇನ್ ಮಾಡಿಕೊಂಡಿದ್ದು, ಹರಾಜಿನಲ್ಲಿ 9 ವಿದೇಶಿಯರ ಸಹಿತ ಗರಿಷ್ಠ 30 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದೆ. ವೆಸ್ಟ್ ಇಂಡೀಸ್ ಆಲ್ರೌಂಡರ್ ಡಿಯೇಂಡ್ರಾ ಡಾಟಿನ್ ಮತ್ತು ಆಸ್ಟ್ರೇಲಿಯಾದ ವೇಗಿ ಕಿಮ್ ಗಾರ್ತ್ ಗರಿಷ್ಠ 50 ಲಕ್ಷ ರೂ. ಮೂಲಬೆಲೆ ಹೊಂದಿರುವ ದುಬಾರಿ ಆಟರ್ಗಾಯರೆನಿಸಿದ್ದಾರೆ.

ರಾಜ್ಯದ ಅನುಭವಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಲಿದ್ದಾರೆ. ಪ್ರತ್ಯುಷಾ ಸಿ. ವೃಂದಾ ದಿನೇಶ್, ಜಿ. ದಿವ್ಯಾ, ರಾಮೇಶ್ವರಿ ಗಾಯಕ್ವಾಡ್, ಸಹನಾ ಪವಾರ್, ಮಿಥಿಲಾ ವಿನೋದ್ ಹರಾಜಿನಲ್ಲಿರುವ ಇತರ ಕನ್ನಡತಿಯರಾಗಿದ್ದಾರೆ. ಹರಾಜಿನಲ್ಲಿ ಗುಜರಾತ್ ಜೈಂಟ್ಸ್ ್ರಾಂಚೈಸಿ ಗರಿಷ್ಠ 10 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದ್ದು, ಗರಿಷ್ಠ 5.95 ಕೋಟಿ ರೂ. ಬಜೆಟ್ ಹೊಂದಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 2.1 ಕೋಟಿ ರೂ. ಬಜೆಟ್ ಉಳಿಸಿಕೊಂಡಿದ್ದು, ಗರಿಷ್ಠ 5 ಆಟಗಾರ್ತಿಯರನ್ನು ಖರೀದಿಸಬಹುದು. ಹಾಲಿ ರನ್ನರ್‌ಅಪ್ ಡೆಲ್ಲಿ ಕ್ಯಾಪಿಟಲ್ಸ್ 2.25 ಕೋಟಿ ಬಜೆಟ್ ಹೊಂದಿದ್ದು, 3 ಆಟಗಾರ್ತಿಯರಷ್ಟೇ ಬೇಕಿದೆ. ಆರ್‌ಸಿಬಿ ತಂಡ 3.35 ಕೋಟಿ ರೂ. ಬಜೆಟ್ ಉಳಿಸಿಕೊಂಡಿದ್ದು, ಗರಿಷ್ಠ 7 ಆಟಗಾರರ ಖರೀದಿಗೆ ಅವಕಾಶವಿದೆ. ಯುಪಿ ವಾರಿಯರ್ಸ್‌ ಬಳಿ 4 ಕೋಟಿ ರೂ. ಬಜೆಟ್ ಉಳಿಸಿಕೊಂಡಿದೆ.

*ಡಬ್ಲ್ಯುಪಿಎಲ್ ಹರಾಜು ಪ್ರಕ್ರಿಯೆ

ಆರಂಭ: ಮಧ್ಯಾಹ್ನ 2

ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋ ಸಿನಿಮಾ.