ಆಕ್ಲೆಂಡ್: ಸತತ ಮೂರು ಗೆಲುವಿನೊಂದಿಗೆ ಟಿ20 ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ ತಂಡದ ಮುಂದಿನ ಗುರಿ ಕ್ಲೀನ್ಸ್ವೀಪ್. ಇದಕ್ಕಾಗಿ ಶ್ರೇಯಸ್ ಅಯ್ಯರ್ ಪಡೆ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಈಡನ್ ಪಾರ್ಕ್ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ಸರಣಿಯ 4ನೇ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಜತೆಗೆ ಭಾರತ ತಂಡ ಬೆಂಚು ಕಾಯಿಸುತ್ತಿರುವ ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಅವರಂಥ ಆಟಗಾರರಿಗೆ ಆಡುವ ಅವಕಾಶ ಕಲ್ಪಿಸುವುದೇ ಎಂಬ ಕುತೂಹಲವಿದೆ.
ಸರಣಿಯ ಮೊದಲ 3 ಪಂದ್ಯಗಳಲ್ಲಿ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಜಯಿಸಿದ್ದು ಕೂಡ ಭಾರತ ತಂಡಕ್ಕೆ ವರದಾನವಾಗಿತ್ತು. ಮೂರೂ ಪಂದ್ಯಗಳಲ್ಲಿ ಭಾರತ ದಿಟ್ಟವಾಗಿಯೇ ಚೇಸಿಂಗ್ ಮಾಡಿ ಗೆದ್ದಿತ್ತು. ಅದರಲ್ಲೂ ವೆಲ್ಲಿಂಗ್ಟನ್ನಲ್ಲಿ ನ್ಯೂಜಿಲೆಂಡ್ನ 199 ರನ್ ಗುರಿ, ಸವಾಲೇ ಅಲ್ಲ ಎಂಬಂತೆ ಗೆದ್ದು ಬೀಗಿತ್ತು. ಇದೀಗ 4ನೇ ಪಂದ್ಯದಲ್ಲೂ ಭಾರತ ಭರ್ಜರಿ ಬ್ಯಾಟಿಂಗ್ ನಿರ್ವಹಣೆಯನ್ನು ಮುಂದುವರಿಸುವ ನಿರೀೆ ಇದೆ. ಒಂದು ವೇಳೆ ಸರಣಿಯಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೆ ಭಾರತ ಯಾವ ರೀತಿಯಲ್ಲಿ ಆರ್ಭಟಿಸಲಿದೆ ಎಂಬುದು ಕೂಡ ಕೌತುಕ ಮೂಡಿಸಿದೆ.
ಬ್ಯಾಟರ್ಗಳ ಅಸ್ಥಿರ ನಿರ್ವಹಣೆ ಮತ್ತು ಬೌಲಿಂಗ್ ವಿಭಾಗದಲ್ಲಿ ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್ ತಂಡ ತವರಿನಲ್ಲೇ ಪರದಾಡುವಂತಾಗಿದೆ. ನಾಯಕ ಮಿಚೆಲ್ ಸ್ಯಾಂಟ್ನರ್ ಬಿಗಿ ದಾಳಿಯೊಂದಿಗೆ ವಿಕೆಟ್ ಕೂಡ ಕಬಳಿಸುತ್ತಿದ್ದರೂ, ಅವರಿಗೆ ಮತ್ತೊಂದೆಡೆಯಿಂದ ಸಮರ್ಥ ಬೆಂಬಲ ಲಭಿಸುತ್ತಿಲ್ಲ. ಇದು ಕಿವೀಸ್ಗೆ ಪ್ರಮುಖ ಹಿನ್ನಡೆ ಎನಿಸಿದೆ.
ಏಕದಿನ&ಟೆಸ್ಟ್ ಸರಣಿಗೆ ಮುನ್ನ ಭಾರತ ತಂಡ ಗೆಲುವಿನ ಲಯ ಕಾಯ್ದುಕೊಳ್ಳಲು ಪ್ರಯತ್ನಿಸುವುದು ಖಚಿತ. ಹೀಗಾಗಿ ಕೋಚ್ ಗೌತಮ್ ಗಂಭೀರ್, ಭಾರತದ ಪಾಲಿಗೆ ಔಪಚಾರಿಕ ಎನಿಸಿರುವ ಈ ಪಂದ್ಯದಲ್ಲಿ ಹೆಚ್ಚಿನ ಪ್ರಯೋಗಗಳಿಗೆ ಕೈಹಾಕುವುದು ಅನುಮಾನ. ಆದರೆ ತಂಡದ ಸಂಯೋಜನೆಯಲ್ಲಿ ದೊಡ್ಡ ವ್ಯತ್ಯಾಸ ತರದಂಥ ಕೆಲ ಬದಲಾವಣೆ ನಿರೀಕ್ಷಿಸಲಾಗಿದೆ.
ಇಶಾನ್ ಕಿಶನ್ ಲಭ್ಯತೆ ಅಸ್ಪಷ್ಟ
ಸರಣಿಯ ಮೊದಲ ಪಂದ್ಯದ ವೇಳೆ ಗಾಯಗೊಂಡಿದ್ದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ 2 ಮತ್ತು 3ನೇ ಪಂದ್ಯದಿಂದ ಹೊರಗುಳಿದಿದ್ದರು. ಈ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಪಂದ್ಯಕ್ಕೆ ಮುನ್ನಾದಿನವೇ ತಿಳಿಸಿತ್ತು. ಆದರೆ ಇದೀಗ ನಾಲ್ಕನೇ ಪಂದ್ಯದಲ್ಲಿ ಅವರು ಆಡುವರೇ, ಇಲ್ಲವೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಹಂಚಿಕೊಂಡಿಲ್ಲ. ಹೀಗಾಗಿ ಕಿಶನ್ ಲಭ್ಯತೆಯ ಬಗ್ಗೆ ಗೊಂದಲವಿದೆ. ಅವರು ಮತ್ತೆ ಗೈರಾದರೆ ವೈಭವ್ ಸೂರ್ಯವಂಶಿ ಆರಂಭಿಕರಾಗಿ ಇನ್ನೊಂದು ಅವಕಾಶ ಪಡೆಯಬಹುದು.
ಟೀಮ್ ನ್ಯೂಸ್:
ಭಾರತ: ಟೆಸ್ಟ್-ಏಕದಿನ ಸರಣಿಗೆ ಪೂರ್ವಭಾವಿಯಾಗಿ ನಿತೀಶ್ ಕುಮಾರ್ ರೆಡ್ಡಿಗೆ ವಿಶ್ರಾಂತಿ ನೀಡಿದರೆ, ಶಿವಂ ದುಬೆ 11ರ ಬಳಗಕ್ಕೆ ಮರಳಬಹುದು. ಇಶಾನ್ ಕಿಶನ್ ಫಿಟ್ ಆಗಿ ಮರಳಿದರೆ, ವೈಭವ್ ಸೂರ್ಯವಂಶಿ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಬೌಲಿಂಗ್ನಲ್ಲಿ ದುಬಾರಿಯಾಗುತ್ತಿರುವ ಅಕ್ಷರ್ ಪಟೇಲ್ ಬದಲಿಗೆ ಕುಲದೀಪ್ ಅಥವಾ ವರುಣ್ ಚಕ್ರವರ್ತಿ ಅವಕಾಶ ಪಡೆದರೆ ಅಚ್ಚರಿ ಇಲ್ಲ. ಅರ್ಷದೀಪ್ಗೆ ವಿಶ್ರಾಂತಿ ನೀಡಿ ಮಯಾಂಕ್ ಯಾದವ್ಗೆ ಮತ್ತೆ ಅವಕಾಶ ಕಲ್ಪಿಸುವ ಸಾಧ್ಯತೆಯೂ ಇದೆ.
ನ್ಯೂಜಿಲೆಂಡ್: ಗಾಯದ ಸಮಸ್ಯೆಯು ಆತಿಥೇಯರ ಬೌಲಿಂಗ್ ವಿಭಾಗಕ್ಕೆ ಪಂದ್ಯದಿಂದ ಪಂದ್ಯಕ್ಕೆ ಹೊಡೆತ ನೀಡುತ್ತಲೇ ಇದೆ. ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿರುವ ಫಗ್ಯುರ್ಸನ್ ಬದಲಿಗೆ, ಗಂಟೆಗೆ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಇನ್ನೋರ್ವ ವೇಗಿ ಮ್ಯಾಟ್ ಫಿಶರ್ ಆಡುವ ನಿರೀಕ್ಷೆ ಇದೆ. ಬ್ಲೇರ್ ಟಿಕ್ನರ್ ಅಥವಾ ನಾಥನ್ ಸ್ಮಿತ್ ಕೂಡ ಕಣಕ್ಕಿಳಿಯಬಹುದು.
*ಆರಂಭ: ಮಧ್ಯಾಹ್ನ 12.30
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.
ಮತ್ತೆ ರನ್ಮಳೆ ನಿರೀಕ್ಷೆ
ಈಡನ್ ಪಾರ್ಕ್ ಮೈದಾನದ ನೇರ ಬೌಂಡರಿ ಅತ್ಯಂತ ಕಿರಿದಾಗಿದೆ. ಅದು ಐಸಿಸಿಯ ಕನಿಷ್ಠ ಮಾನದಂಡಕ್ಕಿಂತಲೂ (59.43 ಮೀ) ಕಡಿಮೆಯಾಗಿದೆ. ಆದರೆ ಈ ನಿಯಮ ಜಾರಿಗೆ ಬರುವ ಮೊದಲೇ ಇದ್ದ ಮೈದಾನವಾಗಿರುವ ಕಾರಣ ಇದಕ್ಕೆ ವಿನಾಯಿತಿ ಇದೆ. ಹೀಗಾಗಿ ಈ ಬಾರಿ ಮತ್ತೆ ರನ್ಪ್ರವಾಹ ಹರಿಯುವ ನಿರೀಕ್ಷೆ ಇದೆ. ಸ್ಕ್ವೇರ್ ಬೌಂಡರಿ ದೊಡ್ಡದಾಗಿರುವುದರಿಂದ ಬೌಲರ್ಗಳು ಕಾರ್ಯತಂತ್ರಕ್ಕೆ ಬೌಲಿಂಗ್ ಮಾಡುವುದು ಅಗತ್ಯವೆನಿಸಿದೆ.
*3: ಭಾರತ ತಂಡ ಈಡನ್ ಪಾರ್ಕ್ನಲ್ಲಿ ಇದುವರೆಗೆ ಆಡಿರುವ 3 ಟಿ20 ಪಂದ್ಯಗಳಲ್ಲೂ ಗೆದ್ದ ಅಜೇಯ ದಾಖಲೆ ಹೊಂದಿದೆ. ನ್ಯೂಜಿಲೆಂಡ್ ಇಲ್ಲಿ ಆಡಿರುವ 33 ಟಿ20ಯಲ್ಲಿ 13ರಲ್ಲಿ ಗೆದ್ದು, 19ರಲ್ಲಿ ಸೋತಿದೆ. 1 ಪಂದ್ಯ ರದ್ದಾಗಿದೆ.
*ಸರಣಿಯಿಂದ ಫಗ್ಯುರ್ಸನ್ ಔಟ್
ನ್ಯೂಜಿಲೆಂಡ್ ವೇಗಿ ಲಾಕಿ ಫಗ್ಯುರ್ಸನ್ ಭಾರತ ವಿರುದ್ಧದ ಟಿ20 ಸರಣಿಯ ಕೊನೇ 2 ಪಂದ್ಯಗಳಿಗೂ ಅಲಭ್ಯರಾಗಿದ್ದಾರೆ. ಅವರು ಸರಣಿಯ 2ನೇ ಪಂದ್ಯದ ವೇಳೆ ಕಾಲಿನ ಹಿಂಭಾಗದ ಸ್ನಾಯುವಿನ ಗಾಯಕ್ಕೊಳಗಾಗಿದ್ದರು. ಅವರ ಬದಲಿಗೆ ಮ್ಯಾಟ್ ಫಿಶರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಫಗ್ಯುರ್ಸನ್ ಜತೆಗೆ ಟಿ20 ಸರಣಿಯಿಂದ ಹೊರಬಿದ್ದಿರುವ ಇನ್ನೋರ್ವ ವೇಗಿ ಮ್ಯಾಟ್ ಹೆನ್ರಿ, ನ.4ರಿಂದ ನಡೆಯಲಿರುವ ಏಕದಿನ ಸರಣಿಗೆ ಫಿಟ್ ಆಗುವ ವಿಶ್ವಾಸವನ್ನು ಕಿವೀಸ್ ಕೋಚ್ ರಾಬ್ ವಾಲ್ಟರ್ ವ್ಯಕ್ತಪಡಿಸಿದ್ದಾರೆ.
*ಸರಣಿಯಲ್ಲಿ ಕ್ಲೀನ್ಸ್ವೀಪ್ ಸಾಧಿಸಲು ಉತ್ತಮ ಅವಕಾಶವನ್ನು ಹೊಂದಿದ್ದೇವೆ. ಟಿ20 ಸರಣಿಯ ನಿರ್ವಹಣೆಯ ಗುಣಮಟ್ಟವು ಏಕದಿನ-ಟೆಸ್ಟ್ ಸರಣಿಗೂ ಉತ್ತಮ ಲಯವನ್ನು ನಿರ್ಮಿಸಿಕೊಡಲಿದೆ ಎಂದು ಕೋಚ್ ಗಂಭೀರ್ ಸರ್ ಈಗಾಗಲೆ ತಿಳಿಸಿದ್ದಾರೆ.
| ತಿಲಕ್ ವರ್ಮ, ಟಿ20 ತಂಡದ ಉಪನಾಯಕ
ಏಕದಿನ ಸರಣಿಗೆ ಗಿಲ್ ಸಿದ್ಧತೆ ಆರಂಭ
ನವೆಂಬರ್ 4ರಿಂದ ಈಡನ್ ಪಾರ್ಕ್ನಲ್ಲಿ ನಡೆಯಲಿರುವ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಗೆ ಪೂರ್ವಭಾವಿಯಾಗಿ ಭಾರತ ತಂಡದ ನಾಯಕ ಶುಭಮಾನ್ ಗಿಲ್ ಗುರುವಾರ, ಟಿ20 ತಂಡದ ನೆಟ್ಸ್ನಲ್ಲೇ ಅಭ್ಯಾಸ ಆರಂಭಿಸಿದರು. ವಿಕೆಟ್ ಕೀಪರ್-ಬ್ಯಾಟರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಮತ್ತು ವೇಗಿ ಗುರುನೂರ್ ಬ್ರಾರ್ ಕೂಡ ಜತೆಗಿದ್ದರು. ಅಭ್ಯಾಸದ ನಡುವೆ ಗಿಲ್ ತನ್ನ ಆಪ್ತ ಸ್ನೇಹಿತ ಹಾಗೂ ಟಿ20 ತಂಡದ ಆರಂಭಿಕ ಅಭಿಷೇಕ್ ಶರ್ಮ ಜತೆಗೆ ಮಾತುಕತೆಯನ್ನೂ ನಡೆಸಿದರು.