ಕ್ರೀಡೆ

ಕ್ರೀಡಾತಾರೆಯರಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​, ಸ್ಪಿನ್​ ದಿಗ್ಗಜ ಅನಿಲ್​ ಕುಂಬ್ಳೆ, ಹಿರಿಯ ಸ್ಪಿನ್ನರ್​ ಹರ್ಭಜನ್​ ಸಿಂಗ್​, ಟೀಮ್​ ಇಂಡಿಯಾ ಕೋಚ್​ ರವಿಶಾಸ್ತ್ರಿ, ಎಡಗೈ ಆರಂಭಿಕ ಶಿಖರ್​ ಧವನ್​, ಕುಸ್ತಿಪಟು ರಿತು ಪೋಗಟ್​ ಮುಂತಾದವರು ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​, ಕೊಳಲು, ನವಿಲುಗರಿ ಮತ್ತು ಬೆಣ್ಣೆ ಹೊಂದಿರುವ ಮಡಕೆಯ ಚಿತ್ರದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಎಂದು ಟ್ವೀಟ್​ ಮಾಡಿದ್ದಾರೆ. ಟೀಮ್​ ಇಂಡಿಯಾ ಮಾಜಿ ನಾಯಕ, ಕೋಚ್​ ಕೂಡ ಆಗಿರುವ ಕನ್ನಡಿಗ ಅನಿಲ್​ ಕುಂಬ್ಳೆ ಅವರು ಟ್ವಿಟರ್​ನಲ್ಲಿ ಕನ್ನಡದಲ್ಲೇ ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸಿರುವುದು ವಿಶೇಷವಾಗಿದೆ. 'ಎಲ್ಲರಿಗೂ ಗೋಕುಲಾಷ್ಟಮಿಯ ಶುಭಾಶಯಗಳು' ಎಂದು ಅನಿಲ್​ ಕುಂಬ್ಳೆ ಅವರು ಕನ್ನಡದಲ್ಲೇ ಬರೆದು ಶುಭಾಶಯ ತಿಳಿಸಿದ್ದಾರೆ.

ಟೀಮ್​ ಇಂಡಿಯಾ ಕೋಚ್​ ರವಿಶಾಸ್ತ್ರಿ ಅವರು, ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಕೃಷ್ಣ ದೇವರು ಎಲ್ಲರ ಜೀವನಕ್ಕೆ ಒಳ್ಳೆಯದು ಮಾಡಲಿ ಎಂದು ಹಾರೈಸಿದ್ದಾರೆ. ಶಿಖರ್​ ಧವನ್​ ಅವರು ಕೂಡ ಜನ್ಮಾಷ್ಟಮಿಯ ಶುಭಾಶಯದೊಂದಿಗೆ ಎಲ್ಲರೂ ಸುರಕ್ಷಿತವಾಗಿರುವಂತೆ ಟ್ವೀಟಿಸಿದ್ದಾರೆ. ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ಶ್ರೇಯಸ್​ ಅಯ್ಯರ್​, ಆಲ್ರೌಂಡರ್​ ಕೃನಾಲ್​ ಪಾಂಡ್ಯ ಕೂಡ ಜನ್ಮಾಷ್ಟಮಿಯ ಶುಭಾಶಯ ಎಂದು ಟ್ವೀಟಿಸಿದ್ದಾರೆ.

ಎಡವಟ್ಟು ಮಾಡಿಕೊಂಡ ಹರ್ಭಜನ್​ ಸಿಂಗ್​

https://twitter.com/harbhajan_singh/status/1293045879763398656
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ ತಿಳಿಸುವ ವೇಳೆ ಹಿರಿಯ ಸ್ಪಿನ್ನರ್​ ಹರ್ಭಜನ್​ ಸಿಂಗ್ ಅವರು ಶ್ರೀಕೃಷ್ಣನ ಚಿತ್ರಕ್ಕೆ ಬದಲಾಗಿ ಸುಬ್ರಹ್ಮಣ್ಯ ದೇವರ ಚಿತ್ರವನ್ನು ಟ್ವೀಟಿಸಿ ಎಡವಟ್ಟು ಮಾಡಿಕೊಂಡಿದ್ದರು. ಬಳಿಕ ತಪ್ಪೊಪ್ಪಿಕೊಂಡ ಹರ್ಭಜನ್​ ಸಿಂಗ್​, ದೇವರ ಚಿತ್ರ ಬದಲಾಗಿರಬಹುದು. ಆದರೆ ದೇವರು ಎಲ್ಲ ಒಂದೇ, ಅವರಿಗೆ ಒಂದೇ ಚಿತ್ರ ಇರುವುದಲ್ಲ. ದೇವರನ್ನು ನಾವು ನಮ್ಮೊಳಗೇ ಕಾಣಬೇಕು. ಟೀಕೆಗಳು ಬೇಡ, ದೇವರನ್ನು ನೀವು ನಂಬುವುದಾದರೆ ಅವರು ಎಲ್ಲ ಕಡೆ ಕಾಣಿಸುತ್ತಾರೆ ಮತ್ತು ಎಲ್ಲ ರೂಪದಲ್ಲೂ ಇರುತ್ತಾರೆ ಎಂದು ಮತ್ತೆ ಟ್ವೀಟಿಸಿದ್ದಾರೆ.