ಬೆಂಗಳೂರು: ಹೊಯ್ಸಳ ಅಂಪೈರ್ ಹಾಸನ, ಚಾಲುಕ್ಯ ಸೇನೆ ಬಾಗಲಕೋಟೆ ಮತ್ತು ಉತ್ತರ ಕನ್ನಡ ಸ್ಟಾಲ್ಲಯನ್ಸ್ ತಂಡಗಳು ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯಲ್ಲಿ ಶುಭಾರಂಭ ಮಾಡಿದವು.
ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಲೀಗ್ನ ದಿನದ ಮೂರು ಪಂದ್ಯಗಳು ಅದ್ಧೂರಿ ಆರಂಭ ಕಲ್ಪಿಸಿದವು. ನೂರಾರು ಕಬಡ್ಡಿ ಪ್ರಿಯರು ಲೀಗ್ನ ಮೊದಲ ದಿನ ನೆಚ್ಚಿನ ತಂಡಗಳನ್ನು ಪ್ರೋತ್ಸಾಯಿಸಿದರು. ದಿನದ ಮೂರನೇ ಪಂದ್ಯದಲ್ಲಿ ಹೊಯ್ಸಳ ಎಂಪೈರ್ ಹಾಸನ ತಂಡ 42-36 ಅಂಕಗಳ ಅಂತರದಿಂದ ಮಂಗಳೂರು ಇಂಡಿಯನ್ಸ್ ಎದುರು ಏಕಪಕ್ಷೀಯ ಜಯ ಗಳಿಸಿ ಐದು ಅಂಕಗಳನ್ನು ತನ್ನದಾಗಿಸಿಕೊಂಡಿತು. ಪಂದ್ಯದ ಮೊದಲ ಅವಧಿಯ ಅಂತ್ಯಕ್ಕೆ 13-15 ಅಂಕಗಳ ಅಂತರದಲ್ಲಿ ಹಿನ್ನಡೆಯಲ್ಲಿದ್ದ ಹಾಸನ ತಂಡ, ದ್ವಿತೀಯಾರ್ಧದಲ್ಲಿ ಸಂಘಟಿತ ಹೋರಾಟ ನೀಡಿತು. ಟ್ಯಾಕಲ್ ಮತ್ತು ರೇಡಿಂಗ್ನಲ್ಲಿ ಅಬ್ಬರಿಸಿದ ಹೊಯ್ಸಳ ಆಟಗಾರರು ಮಂಗಳೂರು ತಂಡವನ್ನು ಪುಟಿದೇಳದಂತೆ ನೋಡಿಕೊಂಡರು. ಒಂದು ಹಂತದಲ್ಲಿ10 ಅಂಕಗಳ ಅಂತರಕ್ಕೆ ಕುಸಿದ ಮಂಗಳೂರು ಕೊನೆಯ ಕ್ಷ ಣದಲ್ಲಿ ಹೋರಾಟ ನಡೆಸಿ ಸೋಲಿನ ಅಂತರವನ್ನು 8ಕ್ಕೆ ತಗ್ಗಿಸಿತು.
ಉತ್ತರ ಕನ್ನಡಕ್ಕೆ ಸುಲಭ ತುತ್ತಾದ ವಿಜಯಪುರ
ದಿನದ ಎರಡನೇ ಪಂದ್ಯದಲ್ಲಿಅಧಿಕಾರಯುತ ಪ್ರದರ್ಶನ ನೀಡಿದ ಉತ್ತರ ಕನ್ನಡ ಸ್ಟಾಲ್ ಲಯನ್ಸ್ ತಂಡ 11 ಅಂಕಗಳ(45-34) ಅಂತರದಿಂದ ವಿಜಯಪುರ ಲಯನ್ಸ್ ವಿರುದ್ಧ ಜಯಭೇರಾ ಬಾರಿಸಿತು. ಪಂದ್ಯದ ಪೂರ್ವಾರ್ಧಕ್ಕೆ 17-13 ಅಂಕಗಳ ಅಂತರದಿಂದ ಮುನ್ನಡೆ ಸಾಧಿಸಿದ ಉತ್ತರ ಕನ್ನಡದ ಆಟಗಾರರು, ದ್ವಿತೀಯಾರ್ಧದಲ್ಲೂ ಇದೇ ಲಯವನ್ನು ಕಾಯ್ದುಕೊಂಡರು. ಟ್ಯಾಕಲ್ ಮತ್ತು ರೇಡಿಂಗ್ನಲ್ಲಿ ಮಿಂಚಿನ ಸಂಚನನ ಮೂಡಿಸಿದ ಲಯನ್ಸ್, ನೆರೆದಿದ್ದ ಕಬಡ್ಡಿ ಪ್ರೀಯರಲ್ಲಿ ಹರ್ಷೊದ್ಗಾರಕ್ಕೆ ಕಾರಣರಾದರು. ಉತ್ತರಾರ್ಧದ ಆರಂಭದಲ್ಲಿವಿಜಯಪುರ ತಂಡ ಪುಟಿದೇಳುವ ಸುಳಿವು ನೀಡಿತಾದರೂ ಕೊನೆಯ ಹಂತದಲ್ಲಿ ಒತ್ತಡ ನಿರ್ವಹಿಸಲು ಹೆಣಗಾಡಿತು. ಹೀಗಾಗಿ ಉತ್ತರ ಕನ್ನಡ ತನ್ನ ಮುನ್ನಡೆಯನ್ನು ಅಂತಿಮವಾಗಿ 45-34ಕ್ಕೆ ವಿಸ್ತರಿಸಿತು. ಈ ಜಯದೊಂದಿಗೆ ಪೂರ್ಣ 5 ಅಂಕಗಳನ್ನು ಕಲೆಹಾಕಿದ ಲಯನ್ಸ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.
ಚಾಲುಕ್ಯ ಸೇನೆ ಶುಭಾರಂಭ: ಡಿಫೆಂಡರ್ ಚಿದಾನಂದ ಅವರ ಅತ್ಯುತ್ತಮ ಪ್ರದರ್ಶನ ನೆರವಿನಿಂದ ಚಾಲುಕ್ಯ ಸೇನೆ ಬಾಗಲಕೋಟೆ ತಂಡ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ1ಅಂಕದಿಂದ(28-27) ಮೈಸೂರು ಮಹಾಸೇನೆ ವಿರುದ್ಧ ರೋಚಕ ಗೆಲುವು ಸಾಧಿಸಿತು.
ರಕ್ಷ ಣಾತ್ಮಕವಾಗಿ ಪಂದ್ಯ ಆರಂಭಿಸಿದ ಉಭಯ ತಂಡಗಳು ಬಳಿಕ ಆಕ್ರಮಣಕಾರಿ ದಾಳಿಗೆ ಒತ್ತು ನೀಡಿದವು. ಆದರೆ ಬಾಗಲಕೋಟೆ ತಂಡ ರಕ್ಷ ಣಾ ವಿಭಾಗದಲ್ಲಿ ಪಂದ್ಯದುದ್ದಕ್ಕೂ ಗಮನ ಸೆಳೆಯಿತು. ಪಂದ್ಯದ ಪ್ರಥಮಾರ್ಧಕ್ಕೆ 12-9ರಲ್ಲಿ ಮುನ್ನಡೆ ಸಾಧಿಸಿದ ಮೈಸೂರು ತಂಡ ದ್ವಿತೀಯಾರ್ಧದಲ್ಲಿ ಅದೇ ಲಯವನ್ನು ಕಾಯ್ದುಕೊಳ್ಳಲು ವಿಫಲಗೊಂಡಿತು. ಮೂರು ಅಂಕಗಳ ಹಿನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬಾಗಲಕೋಟೆ, ರಕ್ಷ ಣಾತ್ಮಕ ಆಟಕ್ಕೆ ಆದ್ಯತೆ ನೀಡಿದ ಕಾರಣ ಕೆಲವೇ ನಿಮಿಷಗಳಲ್ಲಿ ಮೇಲುಗೈ ಸಾಧಿಸಿತು. ಪಂದ್ಯ ಮುಕ್ತಾಯಕ್ಕೆ ಕೊನೆಯ ಹತ್ತು ನಿಮಿಷಗಳಿರುವಾಗ ಉಭಯ ತಂಡಗಳು ಮುನ್ನಡೆಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಆದರೆ ಬಾಗಲಕೋಟೆ ತಂಡ 28-27 ಅಂಕಗಳ ಅಂತರದಿಂದ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಚಾಲುಕ್ಯ ಸೇನೆ ಪೂರ್ಣ 5 ಅಂಕಗಳನ್ನು ತನ್ನದಾಗಿಸಿಕೊಂಡಿತು.
ಅಕ್ಟೋಬರ್ 2ರಂದು ನಡೆಯುವ ಪಂದ್ಯಗಳಲ್ಲಿ ಬೆಂಗಳೂರು ಬಿಸನ್ಸ್ ಮತ್ತು ಮಂಗಳೂರು ಇಂಡಿಯನ್ಸ್ (ಸಂಜೆ 6ಕ್ಕೆ), ಮೈಸೂರು ಮಹಾಸೇನೆ ಮತ್ತು ಉತ್ತರ ಕನ್ನಡ ಸ್ಟಾಲ್ಲಯನ್ಸ್ ( ಸಂಜೆ 7ಕ್ಕೆ) ಬೆಳಗಾವಿ ಬುಲ್ಸ್ ಮತ್ತು ವಿಜಯಪುರ ಲಯನ್ಸ್ (ರಾತ್ರಿ 8ಕ್ಕೆ) ಹಾಗೂ ಚಾಲುಕ್ಯಸೇನೆ ಬಾಗಲಕೋಟೆ ಮತ್ತು ಹೊಯ್ಸಳ ಎಂಪೈರ್ ಹಾಸನ್ ತಂಡಗಳು ಮುಖಾಮುಖಿಯಾಗಲಿವೆ. ಎಲ್ಲಾ ನಾಲ್ಕು ಪಂದ್ಯಗಳು ಟಿವಿ5ನಲ್ಲಿ ನೇರ ಪ್ರಸಾರವಾಗಲಿವೆ.