ಕ್ರೀಡೆ

ವಿಂಡೀಸ್‌ಗೆ ಆಘಾತ ನೀಡಿದ ಜಿಂಬಾಬ್ವೆ

ಹರಾರೆ: ಸಿಕಂದರ್ ರಾಜಾ (68 ರನ್ ಹಾಗೂ 36ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಜಿಂಬಾಬ್ವೆ ತಂಡ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್‌ಗೆ 35 ರನ್‌ಗಳಿಂದ ಆಘಾತ ನೀಡಿದೆ. ಹ್ಯಾಟ್ರಿಕ್ ಗೆಲುವಿನೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದ ಆತಿಥೇಯ ಜಿಂಬಾಬ್ವೆ ತಂಡ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶವನ್ನೂ ಖಚಿತಪಡಿಸಿಕೊಂಡಿದೆ.


ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ, ಸಿಕಂದರ್ ರಾಜಾ ಹಾಗೂ ರ‌್ಯಾನ್ ಬರ್ಲ್ (50) ಅರ್ಧಶತಕದ ನೆರವಿನಿಂದ 49.5 ಓವರ್‌ಗಳಲ್ಲಿ 268 ರನ್ ಕಲೆಹಾಕಿತು. ಪ್ರತಿಯಾಗಿ ಕೈಲ್ ಮೇಯರ್ಸ್‌ (56) ಅರ್ಧಶತಕದ ನಡುವೆಯೂ, ವಿಂಡೀಸ್ ತಂಡ 44.4 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್ ಆಗಿ ಸೋಲು ಕಂಡಿತು.


ನೆದರ್ಲೆಂಡ್‌ಗೆ ಸುಲಭ ಜಯ: ದಿನದ ಮತ್ತೊಂದು ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಮ್ಯಾಕ್ಸ್ ಓ ಡೌಡ್ (90) ಭರ್ಜರಿ ಬ್ಯಾಟಿಂಗ್ ನೆರವಿನಿಂದ ನೆದರ್ಲೆಂಡ್ ತಂಡ ನೇಪಾಳ ಎದುರು 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನೇಪಾಳ, ಲೋಗನ್ ವ್ಯಾನ್ ಬೀಕ್ (24ಕ್ಕೆ4) ದಾಳಿಗೆ ತತ್ತರಿಸಿ 44.3 ಓವರ್‌ಗಳಲ್ಲಿ 168 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ನೆದರ್ಲೆಂಡ್ 27.1 ಓವರ್‌ಗಳಲ್ಲಿ 3 ವಿಕೆಟ್‌ಗೆ 168 ರನ್‌ಗಳಿಸಿ ಜಯಿಸಿತು.