ನವದೆಹಲಿ: ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಎರಡು ಹೊಸ ಚೆಂಡುಗಳನ್ನು ಬಳಸುವ ನಿಯಮಕ್ಕೆ ತಿದ್ದುಪಡಿ ತರಲು ಐಸಿಸಿ ಚಿಂತನೆ ನಡೆಸಿದೆ. ಬೌಲರ್‌ಗಳಿಗೆ ರಿವರ್ಸ್ ಸ್ವಿಂಗ್ ಸಾಧಿಸಲು ನೆರವಾಗುವ ಸಲುವಾಗಿ ಐಸಿಸಿ, 25ನೇ ಓವರ್ ಬಳಿಕ ಒಂದು ಚೆಂಡನ್ನು ಮಾತ್ರ ಬಳಸಲು ಮುಂದಾಗಿದೆ. ಜತೆಗೆ ಬೌಲಿಂಗ್ ಮಾಡುವ ತಂಡಕ್ಕೆ 25ನೇ ಓವರ್ ನಂತರವೂ 2 ಚೆಂಡು ಬಳಸುವ ಆಯ್ಕೆಯನ್ನು ನೀಡಲು ಬಯಸಿದೆ. ಸೌರವ್ ಗಂಗೂಲಿ ನೇತೃತ್ವದ ಕ್ರಿಕೆಟ್ ಸಮಿತಿ ಮಾಡಿರುವ ಈ ಶಿಾರಸುಗಳನ್ನು ಜಿಂಬಾಬ್ವೆಯಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆ ಇದೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಹಿತ ಕೆಲ ಮಾಜಿ ಕ್ರಿಕೆಟಿಗರು ಏಕದಿನ ಕ್ರಿಕೆಟ್‌ನಲ್ಲಿ 2 ಚೆಂಡು ಬಳಸುವುದನ್ನು ಟೀಕಿಸಿದ್ದರು. ಇದರಿಂದಾಗಿ ಏಕದಿನ ಕ್ರಿಕೆಟ್‌ನಲ್ಲಿ ರಿವರ್ಸ್ ಸ್ವಿಂಗ್ ಮಾಯವಾಗುತ್ತಿದೆ ಎಂದು ದೂರಿದ್ದರು. ಪ್ರಸಕ್ತ ಏಕದಿನ ಕ್ರಿಕೆಟ್‌ನಲ್ಲಿ ಪಂದ್ಯದ ಆರಂಭದಿಂದಲೇ ಪ್ರತಿ ಓವರ್ ನಂತರ ಬ್ಯಾಟರ್‌ಗಳು ಪಿಚ್‌ನ ಬದಿಯನ್ನು ಬದಲಾಯಿಸುವ ವೇಳೆ ಚೆಂಡು ಕೂಡ ಬದಲಾಗುತ್ತಿದೆ. ಟೆಸ್ಟ್ ಕ್ರಿಕೆಟ್‌ನಲ್ಲೂ ಓವರ್‌ಗತಿ ಸುಧಾರಿಸಲು ಐಸಿಸಿ, ಸ್ಟಾಪ್ ಕ್ಲಾಕ್ ಪದ್ಧತಿ ಜಾರಿಗೆ ತರಲು ಕೂಡ ಯೋಚಿಸಿದೆ.
ಟಿ20 ಕ್ರಿಕೆಟ್ ಪ್ರಕಾರದಲ್ಲಿ ಕಿರಿಯರ ವಿಶ್ವಕಪ್?: ಪ್ರಸಕ್ತ ಏಕದಿನ ಮಾದರಿಯಲ್ಲಿ ನಡೆಯುತ್ತಿರುವ 19 ವಯೋಮಿತಿ ಪುರುಷರ ವಿಶ್ವಕಪ್ ಅನ್ನು ಟಿ20 ಕ್ರಿಕೆಟ್ ಪ್ರಕಾರಕ್ಕೆ ಬದಲಾಯಿಸಲು ಕೂಡ ಐಸಿಸಿ ಚಿಂತನೆ ನಡೆಸಿದೆ. ಆದರೆ ಇದು ಹಾಲಿ ಪ್ರಸಾರ ಹಕ್ಕು ಒಪ್ಪಂದ ಮುಗಿದ ಬಳಿಕ ಅಂದರೆ 2028ರ ನಂತರವಷ್ಟೇ ಜಾರಿಗೆ ಬರುವ ನಿರೀಕ್ಷೆ ಇದೆ.