ಕ್ರೀಡೆ

ನನ್ನ ಹೆಂಡತಿಯ ಮೂಡ್​... ಪರ್ತ್​ ಪಿಚ್​​ ಕುರಿತು ಅಚ್ಚರಿಯ ಹೇಳಿಕೆ ನೀಡಿದ Irfan Pathan

ನವದೆಹಲಿ: ಪರ್ತ್​ನ ಆಪ್ಟಸ್​​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್​-ಗವಾಸ್ಕರ್​ ಟ್ರೋಫಿ (Border-Gavaskar Trophy) ಟೆಸ್ಟ್​​​ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾ ಮೇಲುಗೈ ಸಾಧಿಸಿದ್ದು, ಆಸ್ಟ್ರೇಲಿಯಾದ ಬೌಲರ್​ಗಳನ್ನು ಬ್ಯಾಟರ್​ಗಳು ಬೆಂಡೆತ್ತಿದ್ದಾರೆ. 46 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ತಂಡವು (Team India) ದಿನದಾಟದ ಅಂತ್ಯಕ್ಕೆ 218 ರನ್​ಗಳ ಮುನ್ನಡೆಯನ್ನು ಸಾಧಿಸಿದ್ದು, ಆತಿಥೇಯರನ್ನು ಸಂಕಷ್ಟಕ್ಕೆ ದೂಡಿದೆ.

ಪರ್ತ್ ಆಪ್ಟಸ್​​ ಕ್ರೀಡಾಂಗಣದಲ್ಲಿನ ಪಿಚ್​ನಲ್ಲಿ ಹೆಚ್ಚು ಹುಲ್ಲು ಇರಲಿದ್ದು, ಪಂದ್ಯ ಮುಗಿಯುವವರೆಗೂ ಬಿರುಕು ಬಿಡುವುದಿಲ್ಲ ಎಂದು ಹೇಳಲಾಗಿತ್ತು. ಪಿಚ್​ನಲ್ಲಿ ಹೆಚ್ಚು ಬೌನ್ಸ್​ ಇರಲಿದ್ದು, ಸ್ಪಿನ್ನರ್​ಗಳಿಗಿಂತ ಹೆಚ್ಚಾಗಿ ವೇಗಿ ಹಾಗೂ ಬ್ಯಾಟ್ಸ್​​ಮನ್​ಗಳಿಗೆ ನೆರವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಎರಡನೇ ದಿನದಾಟಕ್ಕೆ ಪಿಚ್​ ಸಂಪೂರ್ಣ ಬದಲಾಗಿದ್ದು, ಬಿರುಕುಗಳು ನಿಧಾನವಾಗಿ ಕಾಣಿಸಿಕೊಳ್ಳಲು ಶುರು ಮಾಡಿದೆ. ಇದರ ಲಾಭ ಪಡೆದ ಭಾರತದ ಬ್ಯಾಟ್ಸ್​ಮನ್​ಗಳಾದ ಯಶಸ್ವಿ ಜೈಸ್ವಾಲ್ (90 ರನ್​, 193 ಎಸೆತ, 7 ಬೌಂಡರಿ, 2 ಸಿಕ್ಸರ್​) ಹಾಗೂ ಕೆ.ಎಲ್. ರಾಹುಲ್ (62 ರನ್​, 153 ಎಸೆತ, 4 ಬೌಂಡರಿ) ತಲಾ ಅರ್ಧಶತಕ ಸಿಡಿಸುವ ಮೂಲಕ ಕಾಂಗರೂ ಬೌಲರ್​ಗಳನ್ನು ಕಾಡುತ್ತಿದ್ದು, ಈ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​ (Irfan Pathan) ವಿಭಿನ್ನವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಪಿಚ್​ನಲ್ಲಿನ ಬದಲಾವಣೆಗಳ ಬಗ್ಗೆ ಟ್ವೀಟ್​ ಮಾಡಿರುವ ಇರ್ಫಾನ್​, ಈ ಪಿಚ್​ ಹೇಗೆ ಇಷ್ಟು ಬೇಗ ಬದಲಾಯಿತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನ ಹೆಂಡತಿಯ ಮೂಡ್​ ಕೂಡ ಇಷ್ಟು ಬೇಗ ಬದಲಾಗುವುದಿಲ್ಲ ಎಂದು ಟ್ವೀಟ್​ ಮಾಡಿರುವ ಪಠಾಣ್​ ಪಿಚ್​ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತ ಇವರ ಪೋಸ್ಟ್​ಗೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಹಲವರು ನಿಮ್ಮ ಟಿವಿಯಲ್ಲಿ ಏನೋ ಸಮಸ್ಯೆ ಇರಬೇಕೆಂದು ಹೇಳಿದರೆ. ಮತ್ತಷ್ಟು ಜನ ಇರ್ಫಾನ್​ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ಭಾರತ ಮೇಲುಗೈ 

7 ವಿಕೆಟ್​ ನಷ್ಟದೊಂದಿಗೆ ಎರಡನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್​ಗಳು ಎದುರಾಳಿ ತಂಡವನ್ನು 104 ರನ್​ಗಳಿಗೆ ಆಲೌಟ್​ ಮಾಡಿತು. 46 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ತಂಡವು ದಿನದಾಟದ ಅಂತ್ಯಕ್ಕೆ 218 ರನ್​ಗಳ ಮುನ್ನಡೆಯನ್ನು ಸಾಧಿಸಿದೆ.

46 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಯಶಸ್ವಿ ಜೈಸ್ವಾಲ್ (90 ರನ್​, 193 ಎಸೆತ, 7 ಬೌಂಡರಿ, 2 ಸಿಕ್ಸರ್​) ಹಾಗೂ ಕೆ.ಎಲ್. ರಾಹುಲ್ (62 ರನ್​, 153 ಎಸೆತ, 4 ಬೌಂಡರಿ) ತಲಾ ಅರ್ಧಶತಕ ಸಿಡಿಸುವ ಮೂಲಕ ದಿನವಿಡೀ ಕಾಂಗರೂ ಬೌಲರ್​ಗಳನ್ನು ಕಾಡಿದರು. ಮೊದಲ ಇನ್ನಿಂಗ್ಸ್​ನಲ್ಲಿ ಸರಾಗವಾಗಿ ವಿಕೆಟ್​ ಕಿತ್ತಿದ್ದ ಕಾಂಗರೂ ಬೌಲರ್​ಗಳು ಎರಡನೇ ದಿನ ಪರದಾಡಿದರು. ಅಂತಿಮವಾಗಿ ಎರಡನೇ ದಿನದಾಟದ ಅಂತ್ಯಕ್ಕೆ 172 ರನ್​ ಗಳಿಸುವ ಮೂಲಕ 218 ರನ್​ಗಳ ಭರ್ಜರಿ ಲೀಡ್​ ಪಡೆದಿದೆ. ಮೂರನೇ ದಿನದಾಟದಲ್ಲೂ ಈ ಜೋಡಿ ಆಸೀಸ್​ ವೇಗಿಗಳ ವಿರುದ್ಧ ತಮ್ಮ ಪಾರುಪತ್ಯವನ್ನು ಮುಂದುವರೆಸುವ ಸೂಚನೆ ನೀಡಿದ್ದು, ಭಾರತ ಬೃಹತ್​ ಮೊತ್ತ ಪೇರಿಸುವ ಮುನ್ಸೂಚನೆಯನ್ನು ನೀಡಿದೆ.