ಕ್ರೀಡೆ

ನ್ಯೂಜಿಲೆಂಡ್​ ವಿರುದ್ಧ 6 ದಿನಗಳ ಟೆಸ್ಟ್​ ಪಂದ್ಯ ಆಡಲಿದೆ ಶ್ರೀಲಂಕಾ; ಹೀಗಿದೆ ಕಾರಣ

ಕೊಲಂಬೊ: ಸೆಪ್ಟೆಂಬರ್​ ತಿಂಗಳಲ್ಲಿ ನ್ಯೂಜಿಲೆಂಡ್​ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್​​ ಸರಣಿಗೆ ಆತಿಥೇಯ ಶ್ರೀಲಂಕಾ ತಂಡವು ಆತಿಥ್ಯ ವಹಿಸುತ್ತಿದ್ದು, ಆರು ದಿನಗಳ ಕಾಲ ಟೆಸ್ಟ್​ ಪಂದ್ಯ ನಡೆಯಲಿದೆ. ಸಾಮಾನ್ಯವಾಗಿ ನಾವು ನೋಡಿದಂತೆ ಟೆಸ್ಟ್​ ಪಂದ್ಯಗಳು ಐದು ದಿನ ನಡೆದಿರುವುದನ್ನು ನೋಡಿದ್ದೇವೆ. ಆದರೆ, ನ್ಯೂಜಿಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯವು ಆರು ದಿನಗಳ ಕಾಲ ನಡೆಯಲಿದ್ದು, ಅಚ್ಚರಿಗೆ ಕಾರಣವಾಗಿದೆ.

ಸೆಪ್ಟೆಂಬರ್​ 18ರಂದು ನ್ಯೂಜಿಲೆಂಡ್​ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್​ ಸರಣಿ ಆರಂಭವಾಗಲಿದ್ದು, ಸೆಪ್ಟೆಂಬರ್​ 21ರಂದು ವಿಶ್ರಾಂತಿ ಘೋಷಿಸಲಾಗಿದೆ. ಶ್ರೀಲಂಕಾದಲ್ಇ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ಕಾರಣ ಸೆಪ್ಟೆಂಬರ್​ 21ರಂದು ವಿಶ್ರಾಂತಿ ಘೋಷಿಸಲಾಗಿದ್ದು, ಅಂದು ದಿನದಾಟ ನಡೆಯುವುದಿಲ್ಲ. ಆದರೆ ಸೆ.22ರಿಂದ ಟೆಸ್ಟ್ ಪಂದ್ಯ ಮುಂದುವರೆಯಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ ಶುಕ್ರವಾರ ನ್ಯೂಜಿಲೆಂಡ್ ವಿರುದ್ಧದ ಮುಂಬರುವ 2 ಪಂದ್ಯಗಳ ಟೆಸ್ಟ್ ಸರಣಿಯ ಪಂದ್ಯಗಳ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು, ಎರಡೂ ಪಂದ್ಯಗಳು ಗಾಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯವು ಸೆಪ್ಟೆಂಬರ್ 18 ರಂದು ಪ್ರಾರಂಭವಾಗಲಿದ್ದು, ಆರು ದಿನಗಳ ಕಾಲ ನಡೆಯಲಿದೆ. ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸೆಪ್ಟೆಂಬರ್ 26ರಂದು ಆರಂಭವಾಗಲಿದೆ.

ಇದೇ ಮೊದಲಲ್ಲ

ಟೆಸ್ಟ್ ಪಂದ್ಯವೊಂದರಲ್ಲಿ ವಿಶ್ರಾಂತಿ ದಿನವನ್ನು ಘೋಷಿಸಿರುವುದು ಇದೇ ಮೊದಲಲ್ಲ. ಈ ಹಿಂದೇ ಅನೇಕ ಬಾರಿ ಟೆಸ್ಟ್​ ಪಂದ್ಯಗಳಲ್ಲಿ ವಿಶ್ರಾಂತಿ ದಿನ ಘೋಷಿಸಲಾಗಿದೆ. ಇಂಗ್ಲೆಂಡ್‌ನಲ್ಲಿ ಆರು ದಿನಗಳ ಕಾಲ ಅನೇಕ ಪಂದ್ಯಗಳನ್ನು ಆಡಲಾಗುತ್ತಿತ್ತು. ಕೆಲವು ಬಾರಿ ಭಾನುವಾರ ಆಟಕ್ಕೆ ಒಂದು ದಿನದ ವಿಶ್ರಾಂತಿಯನ್ನು ನೀಡಲಾಗುತ್ತಿತ್ತು.

20 ವರ್ಷಗಳ ನಂತರ ಶ್ರೀಲಂಕಾವು ಆರು ದಿನಗಳ ಟೆಸ್ಟ್ ಪಂದ್ಯದ ಆತಿಥ್ಯ ವಹಿಸಲಿದೆ. 2001ರಲ್ಲಿ ಕೊಲಂಬೋದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಒಂದು ದಿನದ ಬ್ರೇಕ್ ನೀಡಲಾಗಿತ್ತು. ಅಂದು ಹುಣ್ಣಿಮೆ ಆಗಿದ್ದರಿಂದ ವಿಶ್ರಾಂತಿ ನೀಡಲಾಗಿತ್ತು. 2008ರಲ್ಲಿ ಢಾಕಾದಲ್ಲಿ ವಿಶ್ರಾಂತಿ ದಿನದೊಂದಿಗಿನ ಮತ್ತೊಂದು ಟೆಸ್ಟ್ ಪಂದ್ಯ ನಡೆದಿತ್ತು. ಬಾಂಗ್ಲಾದೇಶದ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ತಂಡ ಶ್ರೀಲಂಕಾದ ವಿರುದ್ಧದ ಪಂದ್ಯವನ್ನು 6 ದಿನಗಳ ಕಾಲ ಆಡಿತ್ತು. 2008ರ ಡಿಸೆಂಬರ್ 29ರಂದು ಚುನಾವಣೆ ಹಿನ್ನೆಲೆಯಲ್ಲಿ ವಿಶ್ರಾಂತಿ ದಿನವಾಗಿ ನಿಗದಿಪಡಿಸಲಾಗಿತ್ತು.