KL Rahul : ನಿನ್ನೆ (ನ.24) ನಡೆದ ಮೊದಲ ದಿನದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಆರ್ಸಿಬಿ ಫ್ರಾಂಚೈಸಿ ಮತ್ತೆ ತಮ್ಮ ತಂಡಕ್ಕೆ ಖರೀದಿ ಮಾಡಲಿದೆ ಎಂದು ಎಲ್ಲರು ನಂಬಿದ್ದರು. ಆದರೆ, ಆ ನಂಬಿಕೆ ಹುಸಿಯಾಗಿದೆ. 14 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಾಹುಲ್ ಅವರನ್ನು ಖರೀದಿಸಿತು. ಆರ್ಸಿಬಿ ತಂಡವನ್ನು ಸೇರಬೇಕೆಂಬ ಆಸೆಯಲ್ಲಿದ್ದ ರಾಹುಲ್ಗೂ ನಿರಾಸೆಯಾಯಿತು. ಇದರ ಬೆನ್ನಲ್ಲೇ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿದ್ದು, ಮ್ಯಾನೇಜ್ಮೆಂಟ್ ವಿರುದ್ಧ ಟೀಕೆಗಳ ಪ್ರಹಾರ ನಡೆಸುತ್ತಿದ್ದಾರೆ. ಅಲ್ಲದೆ, ರಾಹುಲ್ರನ್ನು ಖರೀದಿ ಮಾಡದಿರಲು ಕಾರಣವೇನು ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ.
ರಾಹುಲ್ ಅವರು ಮತ್ತೆ ಆರ್ಸಿಬಿ ತಂಡಕ್ಕೆ ಮರಳುತ್ತಾರೆ ಎಂಬುದು ಇಂದು ಅಥವಾ ನಿನ್ನೆಯ ಮಾತಲ್ಲ. ಲಖನೌ ಸೂಪರ್ಜೈಂಟ್ಸ್ ತಂಡವನ್ನು ರಾಹುಲ್ ತೊರೆಯುತ್ತಾರೆ ಎಂಬುದು ಗೊತ್ತಾದ ಕೂಡಲೇ ಆರ್ಸಿಬಿಗೆ ಬರುತ್ತಾರೆ ಎಂಬ ಚರ್ಚೆ ಶುರುವಾಯಿತು. ಕನ್ನಡಿಗನಾದ್ದರಿಂದ ರಾಹುಲ್, ಆರ್ಸಿಬಿಗೆ ಬಂದರೆ ಚೆನ್ನಾಗಿರುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಪ್ರತಿಯೊಬ್ಬ ಕ್ರಿಕೆಟಿಗನಿಗೂ ತಮ್ಮ ತವರು ನೆಲದಲ್ಲಿ, ತಮ್ಮದೇ ತಂಡಕ್ಕೆ ಆಡುವ ಆಸೆ ಇರುತ್ತದೆ. ಹೀಗಾಗಿ ಉತ್ತಮ ಪ್ರದರ್ಶನವನ್ನು ಸಹ ತೋರುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಆದರೆ, ಹರಾಜಿನಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ರಾಹುಲ್ರನ್ನು ಕೈಬಿಟ್ಟಿದೆ. ಆರಂಭದಲ್ಲಿ ಬಿಡ್ ಮಾಡಿದರೂ ಕೂಡ ಅತಿ ಹೆಚ್ಚು ಹಣವನ್ನು ವ್ಯಯಿಸಲು ಇಷ್ಟಪಡದ ಆರ್ಸಿಬಿ ಕೊನೆಯಲ್ಲಿ ಬಿಡ್ನಿಂದ ಹಿಂದೆ ಸರಿಯಿತು. ಅಂತಿಮವಾಗಿ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು. ಇದರಿಂದ ಆರ್ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಇಂಥಾ ಕಳಪೆ ಫ್ರಾಂಚೈಸಿಯನ್ನು ನಾವೆಂದೂ ನೋಡೇ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಹರಾಜಿನಲ್ಲಿ ರಾಹುಲ್ರನ್ನು ಆರ್ಸಿಬಿ ತಂಡ ಕೈಬಿಟ್ಟಿದ್ದಕ್ಕೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ರಾಹುಲ್ ಅವರ ಪ್ರದರ್ಶನವೂ ಒಂದು ಕಾರಣ. ಐಪಿಎಲ್‌ನಲ್ಲಿ ರಾಹುಲ್ ಇದುವರೆಗೆ 132 ಪಂದ್ಯಗಳನ್ನು ಆಡಿದ್ದಾರೆ. 45.47 ಸರಾಸರಿ ಮತ್ತು 134.61 ಸ್ಟ್ರೈಕ್ ರೇಟ್‌ನಲ್ಲಿ 4683 ರನ್ ಗಳಿಸಿದ್ದಾರೆ. 4 ಶತಕ ಸಿಡಿಸಿದ್ದು, 37ಕ್ಕೂ ಅಧಿಕ ಬಾರಿ ಅರ್ಧ ಶತಕ ಗಳಿಸಿದ್ದಾರೆ. ಆದರೆ, ಇತ್ತೀಚೆಗೆ ರಾಹುಲ್ ಪ್ರದರ್ಶನ ಕಳಪೆಯಾಗಿದೆ. ಕಳೆದ ವರ್ಷದ ಐಪಿಎಲ್‌ನಲ್ಲಿ ರಾಹುಲ್ ಅವರು 14 ಪಂದ್ಯಗಳಲ್ಲಿ 136.13 ಸ್ಟ್ರೈಕ್ ರೇಟ್ನೊಂದಿಗೆ 37.14 ರನ್ ಸರಾಸರಿಯಲ್ಲಿ 520 ರನ್ ಗಳಿಸಿದ್ದರು. ತಮ್ಮ ಕಳಪೆ ಸ್ಟ್ರೈಕ್ ರೇಟ್ ಕಾರಣಕ್ಕೆ ತೀವ್ರ ಟೀಕೆಗೂ ಗುರಿಯಾದರು. ಇತ್ತೀಚೆಗೆ ರಾಹುಲ್ ಅವರು ನೀರಸ ಪ್ರದರ್ಶನ ತೋರುತ್ತಿದ್ದಾರೆ. ಅವರ ಸ್ಟ್ರೈಕ್ರೇಟ್ ಕಡಿಮೆ ಇರುವ ಕಾರಣ ಅವರಿಗೆ ಹೆಚ್ಚು ಹಣವನ್ನು ವ್ಯಯಿಸದೇ ಆರ್ಸಿಬಿ ಮ್ಯಾನೇಜ್ಮೆಂಟ್ ಹಿಂದೆ ಸರಿದಿದೆ ಎನ್ನಲಾಗಿದೆ. ಆದರೆ, ತವರಿನಲ್ಲಿ ಆಡುವಾಗ ರಾಹುಲ್ ಅವರು ತಮ್ಮ ಶಕ್ತಿ ಮೀರಿ ಪ್ರದರ್ಶನ ನೀಡುತ್ತಿದ್ದರು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿತ್ತು.
ಇನ್ನು ಆರ್ಸಿಬಿಗೆ ಒಂದು ಹಣೆಪಟ್ಟಿ ಇದೆ. ಅದೇನೆಂದರೆ, ಆರ್ಸಿಬಿ ಮ್ಯಾನೇಜ್ಮೆಂಟ್ ಕನ್ನಡಿಗರನ್ನು ಕಡಗಣಿಸುತ್ತದೆ ಎಂಬುದು ಬಹಳ ಹಿಂದಿನಿಂದಲೂ ಕೇಳಿಬರುತ್ತಿರುವ ಮಾತಾಗಿದೆ. ಈ ಹಿಂದೆ ಅನಿಲ್ ಕುಂಬ್ಳೆ ಕೂಡ ಬಹಿರಂಗವಾಗಿಯೇ ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ರಾಬಿನ್ ಉತ್ತಪ್ಪ ಹಾಗೂ ಮನಿಶ್ ಪಾಂಡೆ ಸೇರಿದಂತೆ ಅನೇಕ ಕನ್ನಡಿಗರನ್ನು ಕಡೆಗಣಿಸಿದ ಕೆಟ್ಟ ಇತಿಹಾಸವನ್ನು ಆರ್ಸಿಬಿ ಹೊಂದಿದೆ. ರಾಹುಲ್ ಕೂಡ ಈ ಹಿಂದೆ ಇದೇ ತಂಡದಲ್ಲಿದ್ದರು. ಆದರೆ, ಮಧ್ಯದಲ್ಲಿ ಬೇರೆ ತಂಡ ಅವರನ್ನು ಖರೀದಿ ಮಾಡಿತು. ಇದೀಗ ಮತ್ತೆ ಆರ್ಸಿಬಿಗೆ ರಾಹುಲ್ ಅವರನ್ನು ಖರೀದಿ ಮಾಡುವ ಅವಕಾಶ ಸಿಕ್ಕರೂ ಅದನ್ನು ಕೈಚೆಲ್ಲಿರುವುದು ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ. ಅಲ್ಲದೆ, ಕನ್ನಡಿಗರನ್ನು ಆರ್ಸಿಬಿ ಮ್ಯಾನೇಜ್ಮೆಂಟ್ ಕಡೆಗಣಿಸುತ್ತದೆ ಎಂಬ ಹಣೆಪಟ್ಟಿಯನ್ನು ಮತ್ತೊಮ್ಮೆ ಹೊತ್ತುಕೊಂಡಿದೆ. ರಾಹುಲ್ ಅವರನ್ನು ಕೈಬಿಡಲು ಇದು ಕೂಡ ಕಾರಣ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಜಿಯೋಸಿನಿಮಾದೊಂದಿಗೆ ಮಾತನಾಡಿದ ಉತ್ತಪ್ಪ, ಆರ್ಸಿನಿ ಅಭಿಮಾನಿಗಳು ತುಂಬಾ ಬೇಸರ ಅನುಭವಿಸುತ್ತಾರೆ. ಏಕೆಂದರೆ, ಆರ್ಸಿಬಿ ತನ್ನ ಪರ್ಸ್ನಲ್ಲಿ ಅತಿ ಹೆಚ್ಚು ಹಣ ಉಳಿಸಿಕೊಂಡಿರುವ ಎರಡನೇ ತಂಡವಾಗಿತ್ತು. ಭಾರಿ ಬೇಡಿಕೆ ಇರುವ ಆಟಗಾರರ ಹಿಂದೆ ಬೀಳದ ಆರ್ಸಿಬಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ಸ್ಥಳೀಯ ಹುಡುಗ. ಆರ್ಸಿಬಿ ಬಿಡ್ಡಿಂಗ್ ನೋಡಿ ನಾನು ಗೊಂದಲಕ್ಕೆ ಒಳಗಾಗಿದ್ದೇನೆ. ಮೊದಲ ಎರಡು ಮಾರ್ಕ್ಯೂ ಸೆಟ್‌ಗಳಲ್ಲಿ ನೀವು ಒಂದಕ್ಕಿಂತ ಹೆಚ್ಚು ಆಯ್ಕೆಯನ್ನೇ ಮಾಡಲಿಲ್ಲ. ಒಂದು ಕಡೆ ನೀವು ತಂಡವನ್ನು ಮರು ನಿರ್ಮಾಣ ಮಾಡಲು ಪ್ರಯತ್ನಿಸಿರುವಾಗ ಮತ್ತು ನಿಮ್ಮದೇಯಾದ ಲೆಕ್ಕಾಚಾರ ಮಾಡುವಾಗ ಇಷ್ಟು ವರ್ಷಗಳಿಂದ ನಿಮ್ಮನ್ನು ಬೆಂಬಲಿಸಿಕೊಂಡು ಬರುತ್ತಿರುವ ಅಭಿಮಾನಿಗಳ ಭಾವನೆಗಳಿಗೂ ನೀವು ಬೆಲೆ ಕೊಡಬೇಕಿತ್ತು. ಈ ರೀತಿ ಮಾಡಬಾರದಿತ್ತು. ಅಭಿಮಾನಿಗಳ ಟ್ವೀಟ್ಗಳನ್ನು ನೋಡಿದಾಗ ನನಗೆ ನಿಜಕ್ಕೂ ಬೇಸರವಾಯಿತು. ನಾನು ಒಬ್ಬ ಆರ್ಸಿಬಿಯ ಅಭಿಮಾನಿಯಾಗಿ ಮತ್ತು ಮಾಜಿ ಆಟಗಾರನಾಗಿ ಹೇಳುವುದಾದರೆ ಆರ್ಸಿಬಿ ತಂತ್ರವನ್ನು ಕಳೆದುಕೊಂಡಿದೆ ಅನಿಸುತ್ತಿದೆ ಎಂದು ಉತ್ತಪ್ಪ ಬೇಸರ ಹೊರಹಾಕಿದರು.
ನಿನ್ನೆ ಹರಾಜಿನಲ್ಲಿ ಆರ್ಸಿಬಿ ತಂಡ ಜೋಶ್ ಹ್ಯಾಸಲ್ವುಡ್ (12.50 ಕೋಟಿ ರೂ.), ಫಿಲ್ ಸಾಲ್ಟ್ (11.50 ಕೋಟಿ ರೂ.), ಜಿತೇಶ್ ಶರ್ಮ (11 ಕೋಟಿ ರೂ.), ಲಿಯಾಮ್ ಲಿವಿಂಗ್ಸ್ಟೋನ್ (8.75 ಕೋಟಿ ರೂ.) ರಸಿಕ್ ಸಲಾಂ (6 ಕೋಟಿ ರೂ.) ಹಾಗೂ ಸುಯಾಶ್ ಶರ್ಮ (2.60 ಕೋಟಿ ರೂ.) ಅವರನ್ನು ಖರೀದಿ ಮಾಡಿದ್ದು, ತನ್ನ ಪರ್ಸ್ನಲ್ಲಿ 30.65 ಕೋಟಿ ರೂ. ಉಳಿಸಿಕೊಂಡಿದೆ. ಇಂದು ಎರಡನೇ ದಿನ ಅಥವಾ ಕೊನೆಯ ದಿನದ ಹರಾಜು ನಡೆಯಲಿದೆ. (ಏಜೆನ್ಸೀಸ್)