ನವದೆಹಲಿ: ಬಿಸಿಸಿಐ ಕಾರ್ಯದರ್ಶಿಯಾಗಿ (BCCI Secretary) ಕಾರ್ಯನಿರ್ವಹಿಸಿದ್ದ ಜಯ್ ಷಾ (Jay Shah) ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ (ICC President) ಅಧಿಕಾರ ವಹಿಸಿಕೊಂಡಿದ್ದು, ಇದೀಗ ಬಿಸಿಸಿಐ ಕಾರ್ಯದರ್ಶಿ ಸ್ಥಾನ ತೆರವಾಗಿದೆ. ಇದೀಗ ಈ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು, ಮುಂದಿನ ಕಾರ್ಯದರ್ಶಿ ಯಾರಾಗಲಿದ್ದಾರೆ ಎಂಬ ಕುತೂಹಲ ಶುರುವಾಗಿದೆ.
ಇದೀಗ ಈ ಸ್ಥಾನಕ್ಕೆ ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವ್‌ಜಿತ್ ಸೈಕಿಯಾ, ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ, ಅನಿಲ್ ಪಟೇಲ್ ಹೆಸರು ಕೇಳಿ ಬರುತ್ತಿದ್ದು, ಅಂತಿಮವಾಗಿ ಈ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐನ (BCCI) ಹಿರಿಯ ಅಧಿಕಾರಿಯೊಬ್ಬರು, ಏನಾಗುತ್ತಿದೆ ಎಂಬುದು ನಮಗೆ ತಿಳಿದಿಲ್ಲ. ಪ್ರಸ್ತುತ ಈ ವಿಚಾರವಾಗಿ ರಾಜ್ಯ ಕ್ರಿಕೆಟ್ ಮಂಡಳಿಗಳು ಮೌನ ವಹಿಸಿದ್ದು, ಯಾರಾಗುತ್ತಾರೆ ಎಂಬ ಪ್ರಶ್ನೆ ನಮ್ಮನ್ನು ಕಾಡಲು ಶುರು ಮಾಡಿದೆ. ದಿನದಿಂದ ದಿನಕ್ಕೆ ವ್ಯವಹರಿಸಬೇಕಾದ ಸಮಸ್ಯೆಗಳಿವೆ ಮತ್ತು ಯಾರಾದರೂ ಬಿಸಿಸಿಐ ಅನ್ನು ಹೇಗೆ ನಡೆಸುತ್ತಾರೆ ಎಂಬುದರ ಕುರಿತು ಸ್ವಲ್ಪ ಜ್ಞಾನವನ್ನು ಹೊಂದಿರಬೇಕು.
ಮೊದಲೇ ಈ ಬಗ್ಗೆ ನಿರ್ಧರಿಸಬೇಕಿತ್ತು. ವಿಶ್ವದ ಅತ್ಯಂತ ಶಕ್ತಿಶಾಲಿ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐನಲ್ಲಿ ಇದೀಗ ಕಾರ್ಯದರ್ಶಿಯ ಹುದ್ದೆ ಖಾಲಿ ಇದ್ದು, ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ಅಂತಿಮವಾಗಿ ಈ ಸ್ಥಾನಕ್ಕೆ ಯಾರು ಬಂದು ಕೂರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.