ಕ್ರೀಡೆ

ಡೆಲ್ಲಿ ವಿರುದ್ಧ ರಾಜಸ್ಥಾನ ರಾಯಲ್ಸ್​ ಎಡವಿದ್ದೆಲ್ಲಿ? ನಾಯಕ ಸ್ಯಾಮ್ಸನ್​ ನೀಡಿದ ಕಾರಣ ಹೀಗಿದೆ...

ನವದೆಹಲಿ: ಸತತ 5 ಗೆಲುವಿನ ಬಳಿಕ ಸತತ 2 ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ರಾಜಸ್ಥಾನ ರಾಯಲ್ಸ್​ ತಂಡ ಐಪಿಎಲ್​&17ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳುವ ಅವಕಾಶವನ್ನು ಕೈಚೆಲ್ಲಿದೆ. "ನಾವು ಪಂದ್ಯ ಗೆಲ್ಲುವ ಅವಕಾಶ ಹೊಂದಿದ್ದೆವು. ಓವರ್​ಗೆ 11&12 ರನ್​ ಗಳಿಸಬಹುದಾಗಿತ್ತು. ಆದರೆ ಬೌಲಿಂಗ್​ನಲ್ಲಿ 10 ಹೆಚ್ಚುವರಿ ರನ್​ ಬಿಟ್ಟುಕೊಟ್ಟಿದ್ದೆವು. ನಾವು ಕೆಲ ಬೌಂಡರಿಗಳನ್ನು ಬಿಟ್ಟುಕೊಡದಿದ್ದರೆ ಚೇಸಿಂಗ್​ ಸುಲಭವಾಗಿರುತ್ತಿತ್ತು' ಎಂದು ರಾಜಸ್ಥಾನ ರಾಯಲ್ಸ್​ ನಾಯಕ ಸಂಜು ಸ್ಯಾಮ್ಸನ್​ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 20 ರನ್​ಗಳಿಂದ ಸೋಲು ಅನುಭವಿಸಿದ ಬಳಿಕ ಹೇಳಿದ್ದಾರೆ.

"ಸ್ಟಬ್ಸ್​ ಚೆನ್ನಾಗಿ ಬ್ಯಾಟಿಂಗ್​ ಮಾಡಿದರು. ಅದರಲ್ಲೂ ಕಳೆದ 10&11 ಪಂದ್ಯಗಳಿಂದ ಉತ್ತಮ ಬೌಲಿಂಗ್​ ಮಾಡುತ್ತಿರುವ ಸಂದೀಪ್​ ಶರ್ಮ ವಿರುದ್ಧ ಅತ್ಯುತ್ತಮವಾಗಿ ಆಡಿದರು. ನಮ್ಮ ಅತ್ಯುತ್ತಮ ಬೌಲರ್​ಗಳಾದ ಚಾಹಲ್​&ಸಂದೀಪ್​ ವಿರುದ್ಧ 2&3 ಸಿಕ್ಸರ್​ಗಳನ್ನು ಹೆಚ್ಚುವರಿಯಾಗಿ ಸಿಡಿಸಿದರು' ಎಂದು ಸ್ಯಾಮ್ಸನ್​ ಹೇಳಿದರು.

ಸಂಜು ಸ್ಯಾಮ್ಸನ್​ (56) ಗರಿಷ್ಠ ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್​ ತಂಡವನ್ನು ಮುನ್ನಡೆಸಿದ ನಾಯಕ ಎನಿಸಿದರು. ಶೇನ್​ ವಾರ್ನ್​ (55) ಸಾಧನೆಯನ್ನು ಸ್ಯಾಮ್ಸನ್​ ಹಿಂದಿಕ್ಕಿದರು.

ಡೆಲ್ಲಿ ತಂಡದ 222 ರನ್​ ಸವಾಲಿಗೆ ಪ್ರತಿಯಾಗಿ ಆರಂಭಿಕರಾದ ಯಶಸ್ವಿ ಜೈಸ್ವಾಲ್​ (4), ಜೋಸ್​ ಬಟ್ಲರ್​ (19) ಬೇಗನೆ ನಿರ್ಗಮಿಸಿದರೂ, ಸಂಜು ಸ್ಯಾಮ್ಸನ್​ (86) ಹೋರಾಟ ಮುಂದುವರಿಸಿದರು. ಅವರಿಗೆ ರಿಯಾನ್​ ಪರಾಗ್​ (27) ಮತ್ತು ಶುಭಂ ದುಬೆ (25) ಉತ್ತಮ ಬೆಂಬಲ ಒದಗಿಸಿದರು. ಆದರೆ ಗೆಲುವಿನಿಂದ 60 ರನ್​ ದೂರವಿದ್ದಾಗ ಸ್ಯಾಮ್ಸನ್​ ಔಟಾದ ಬಳಿಕ ರಾಜಸ್ಥಾನ ದಿಢೀರ್​ ಕುಸಿತ ಕಂಡಿತು. ಅಂತಿಮವಾಗಿ 8 ವಿಕೆಟ್​ಗೆ 201 ರನ್​ ಗಳಿಸಲಷ್ಟೇ ಶಕ್ತವಾಯಿತು. '

*ಉತ್ತಮ ಲೆಂತ್​ ಎಸೆತಗಳನ್ನು ಎಸೆಯುವುದು ಅತ್ಯಂತ ಪ್ರಮುಖವಾಗಿತ್ತು. ಡೆತ್​ ಓವರ್​ಗಳಲ್ಲಿ ಬೌಲಿಂಗ್​ ಮಾಡುವಾಗ ಅದೇ ಪ್ರಮುಖ ಸವಾಲು.

| ಕುಲದೀಪ್​ ಯಾದವ್​, ಪಂದ್ಯಶ್ರೇಷ್ಠ

*ನಮ್ಮ ಬೌಲರ್​ಗಳ ನಿರ್ವಹಣೆ ಸಕಾರಾತ್ಮಕವಾಗಿತ್ತು. ಕುಲದೀಪ್​ ಮತ್ತೊಮ್ಮೆ ನಮಗೆ ಗೆಲುವು ತಂದುಕೊಟ್ಟರು. ನಾವು ಪ್ರತಿ ಪಂದ್ಯದಿಂದ ಕಲಿಯಲು ಬಯಸಿದ್ದೇವೆ.

| ರಿಷಭ್​ ಪಂತ್​, ಡೆಲ್ಲಿ ನಾಯಕ