ಕ್ರೀಡೆ

ವಿಶ್ವಕಪ್​ ಫೈನಲ್​ನಲ್ಲಿ ಕೊಹ್ಲಿ ವಿಕೆಟ್​ ಬಿದ್ದಾಗ ಲೈಬ್ರೇರಿಯಂತಾಗಿತ್ತು ಸ್ಟೇಡಿಯಂ!

ಸಿಡ್ನಿ: ಏಕದಿನ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ವಿಕೆಟ್​ ಬಿದ್ದಾಗ ಸುಮಾರು 1 ಲಕ್ಷ ಜನರಿಂದ ತುಂಬಿದ್ದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗ್ರಂಥಾಲಯದಂತೆ ಮೌನ ಆವರಿಸಿತ್ತು ಎಂದು ಚಾಂಪಿಯನ್​ ಆಸ್ಟ್ರೆಲಿಯಾ ತಂಡದ ನಾಯಕ ಪ್ಯಾಟ್​ ಕಮ್ಮಿನ್ಸ್​ ಬಣ್ಣಿಸಿದ್ದಾರೆ.

ಕೆಎಲ್​ ರಾಹುಲ್​ ಜತೆ ಉಪಯುಕ್ತ ಜತೆಯಾಟವಾಡುತ್ತಿದ್ದ ಕೊಹ್ಲಿ 54 ರನ್​ ಗಳಿಸಿ ಕಮ್ಮಿನ್ಸ್​ ಎಸೆತದಲ್ಲಿ ಬೌಲ್ಡಾಗಿದ್ದರು. ನಂತರದಲ್ಲಿ ಭಾರತಕ್ಕೆ ಪಂದ್ಯದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಲೇ ಇಲ್ಲ. ಕೊಹ್ಲಿ ಆ ಹಂತದಲ್ಲಿ ಔಟಾಗಿದ್ದರಿಂದ ಭಾರತಕ್ಕೆ 300ರ ಸನಿಹ ತಲುಪುವ ಅವಕಾಶವೂ ತಪ್ಪಿದಂತಾಯಿತು. ಹೀಗಾಗಿ ಕೊಹ್ಲಿ ವಿಕೆಟ್​ನ ಮಹತ್ವವನ್ನು ಅರಿತಿದ್ದ ಪ್ರೇಕ್ಷಕರು ಆಘಾತಕ್ಕೊಳಗಾಗಿ ಮೌನವಾಗಿದ್ದರು.

"ನಾವು ಕೊಹ್ಲಿ ವಿಕೆಟ್​ನ ಸಂಭ್ರಮಾಚರಣೆ ನಡೆಸುತ್ತಿದ್ದಾಗ ಸ್ಟೀವನ್​ ಸ್ಮಿತ್​, 1 ಲಕ್ಷ ಭಾರತೀಯರಿಂದ ತುಂಬಿದ್ದ ಸ್ಟೇಡಿಯಂನಲ್ಲಿ ನೀರವ ಮೌನ ಆವರಿಸಿದ್ದನ್ನು ಗಮನಕ್ಕೆ ತಂದರು. ನಮ್ಮ ಪಾಲಿಗೆ ಅದೊಂದು ಸ್ಮರಣೀಯವಾದ ಕ್ಷಣ' ಎಂದು ಕಮ್ಮಿನ್ಸ್​ ಹೇಳಿದ್ದಾರೆ.