ಹೈದರಾಬಾದ್: ಆತಿಥೇಯ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಗೆ ವೇದಿಕೆ ಸಜ್ಜಾಗಿದ್ದು, ಗುರುವಾರದಿಂದ ಹೈದರಾಬಾದ್ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಈ ಸಮಯದಲ್ಲಿ 'ಬಜ್ಬಾಲ್' ಎಂಬ ಪದ ವ್ಯಾಪಕವಾಗಿ ಕೇಳಿಬರುತ್ತಿದೆ. ಹಾಗಾದರೆ ಏನಿದು 'ಬಜ್ಬಾಲ್' ಎಂಬ ಮಾಹಿತಿ ಇಲ್ಲಿದೆ.
ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ 2022ರ ಮೇನಲ್ಲಿ ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ ಕೋಚ್ ಮತ್ತು ಆಲ್ರೌಂಡರ್ ಬೆನ್ ಸ್ಟೋಕ್ಸ್ ನಾಯಕರಾಗಿ ನೇಮಕಗೊಂಡ ಬಳಿಕ ಆಕ್ರಮಣಕಾರಿ ಆಟವಾಡುತ್ತ ಬಂದಿದೆ. ವಿಕೆಟ್ ಬೀಳುತ್ತಿದ್ದರೂ ತ್ವರಿತಗತಿಯಲ್ಲೇ ರನ್ ಗಳಿಸುವುದು, ಟೆಸ್ಟ್ನಲ್ಲೂ ಏಕದಿನದಂತೆ ಪ್ರತಿ ಓವರ್ಗೆ 6-7ರ ಸರಾಸರಿಯಲ್ಲಿ ರನ್ ಕಲೆಹಾಕುವುದು, ಸುರಕ್ಷಿತ ಸ್ಥಿತಿಯಲ್ಲಿರದಿದ್ದರೂ, ಇನಿಂಗ್ಸ್ ಡಿಕ್ಲೇರ್ ಘೋಷಿಸಿ ಪಂದ್ಯ ಗೆಲ್ಲುವುದಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಈ ಕಾರ್ಯತಂತ್ರದ ಪ್ರಮುಖಾಂಶ.
ಮೆಕ್ಕಲಂ 'ಬಜ್' ಎಂಬ ನಿಕ್ನೇಮ್ ಹೊಂದಿರುವ ಕಾರಣ ಬ್ರಿಟಿಷ್ ಮಾಧ್ಯಮಗಳು ಇದಕ್ಕೆ 'ಬಜ್ಬಾಲ್' ಎಂಬ ಹೆಸರು ನೀಡಿವೆ. ಈ ತಂತ್ರಗಾರಿಕೆ ಈಗಾಗಲೆ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಕ್ರಾಂತಿ ಎಬ್ಬಿಸಿದೆ. ಇಂಗ್ಲೆಂಡ್ ಕಳೆದ 18 ಟೆಸ್ಟ್ಗಳಲ್ಲಿ 13ರಲ್ಲಿ ಗೆದ್ದಿರುವುದು ಈ ಕಾರ್ಯತಂತ್ರದ ಯಶಸ್ಸಿಗೆ ಸಾಕ್ಷಿಯಾಗಿದೆ. ಹೀಗಾಗಿ ಭಾರತದಲ್ಲೂ ಇದು ಯಶಸ್ಸು ಕಾಣುವುದೇ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿದೆ ಮತ್ತು ಇದು ಸರಣಿ ಬಗೆಗಿನ ಕಾತರವನ್ನೂ ಹೆಚ್ಚಿಸಿದೆ.