Mohammed Siraj : ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಬಾರ್ಡರ್ ಗವಾಸ್ಕರ್ ಸರಣಿಯನ್ನು ಭಾರತ ಕೈಚೆಲ್ಲಿದೆ. 162 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಆಸೀಸ್ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ ಐದು ಪಂದ್ಯಗಳ ಸರಣಿಯನ್ನು ಕಾಂಗರೂ ಪಡೆ 3-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಟೀಮ್ ಇಂಡಿಯಾದ ನಾಯಕ ಜಸ್ಪ್ರೀತ್ ಬುಮ್ರಾ ಗಾಯದ ಕಾರಣ ಮೂರನೇ ದಿನ ಫೀಲ್ಡಿಂಗ್ ಮಾಡಲಿಲ್ಲ. ಹೀಗಾಗಿ ಭಾರತದ ಬೌಲಿಂಗ್ ದಾಳಿಯಲ್ಲಿ ಬುಮ್ರಾ ಕೊರತೆ ಸ್ಪಷ್ಟವಾಗಿ ಗೋಚರಿಸಿತು. ಮೊದಲ ಎರಡು ಓವರ್‌ಗಳಲ್ಲಿ ಭಾರತದ ವೇಗಿಗಳು 26 ರನ್‌ಗಳನ್ನು ಬಿಟ್ಟುಕೊಟ್ಟರು. ಅದರಲ್ಲಿ 12 ರನ್ ಹೆಚ್ಚುವರಿ ರೂಪದಲ್ಲಿ ಬಂದಿರುವುದು ಗಮನಾರ್ಹ. ಅದರಲ್ಲೂ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಲಯ ಕಳೆದುಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸಿರಾಜ್ ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಛಾಪು ತೋರಿಸಲು ಸಾಧ್ಯವಾಗಲಿಲ್ಲ.
ಸಿರಾಜ್ ಮೊದಲ ಓವರ್ನಲ್ಲಿ 13 ರನ್ ಬಿಟ್ಟುಕೊಟ್ಟರು. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಸಿರಾಜ್ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ. ಅಲ್ಪ ಗುರಿಯನ್ನು ರಕ್ಷಿಸುವಲ್ಲಿ ಭಾರತೀಯ ಬೌಲರ್‌ಗಳ ಪ್ರದರ್ಶನ ನಿರಾಶಾದಾಯಕವಾಗಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಸಿರಾಜ್ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಲೈನ್ ಮತ್ತು ಲೆಂಥ್ನೊಂದಿಗೆ ಬೌಲಿಂಗ್ ಮಾಡಿದರು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ತಮ್ಮ ಲಯವನ್ನು ಕಳೆದುಕೊಂಡರು. ಅವರು ಸಾಕಷ್ಟು ಹೆಚ್ಚುವರಿ ರನ್ ನೀಡಿದರು. ಒಟ್ಟು 15 ಎಕ್ಸ್‌ಟ್ರಾಗಳನ್ನು ನೀಡುವುದು ನಿಜಕ್ಕೂ ಸ್ವೀಕಾರಾರ್ಹವಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಡುವಾಗ ಬೌಲರ್‌ಗಳು ನೋ ಬಾಲ್‌ಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಗವಾಸ್ಕರ್ ಅವರು ತಿಳಿಸಿದರು.
ನೋ ಬಾಲ್‌ಗಳನ್ನು ಎಸೆಯುವುದು ಅಕ್ಷಮ್ಯ ಅಪರಾಧ. ವೃತ್ತಿಪರ ಕ್ರಿಕೆಟಿಗರು ಎಂದಿಗೂ ನೋ ಬಾಲ್‌ಗಳನ್ನು ಬೌಲ್ ಮಾಡಬಾರದು. ಕೆಲವೊಮ್ಮೆ ನೋ ಬಾಲ್ ಮತ್ತು ವೈಡ್‌ಗಳು ಕೂಡ ಫಲಿತಾಂಶದ ದಿಕ್ಕನ್ನೇ ಬದಲಾಯಿಸುತ್ತದೆ. ವೇಗವಾಗಿ ಬೌಲ್ ಮಾಡಲು ಪ್ರಯತ್ನಿಸಿದಾಗ ಕೆಲವೊಮ್ಮೆ ವೈಡ್‌ಗಳನ್ನು ಮಾಡುತ್ತೇವೆ. ಹೀಗಾಗಿ ನಾವು ಲೈನ್ ಅಂಡ್ ಲೆಂಥ್ ಮೇಲೆ ಸ್ವಲ್ಪ ಗಮನ ಹರಿಸಬೇಕು ಎಂದು ಗವಾಸ್ಕರ್ ಹೇಳಿದರು. (ಏಜೆನ್ಸೀಸ್)