ಕ್ರೀಡೆ

ಹಡಗಿನಲ್ಲಿ ಹಲವು ರಂಧ್ರಗಳಿವೆ ಎಂದು ಧೋನಿ ಹೇಳಿದ್ದೇಕೆ?

ದುಬೈ: ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಫಾರ್ಮ್‌ನಲ್ಲಿರುವ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ನಿರ್ವಹಣೆ ಈಗ ನಾಯಕ ಎಂಎಸ್ ಧೋನಿ ತಲೆಕೆಡಿಸಿದೆ. ಹೀಗಾಗಿ ಅವರು, ‘ಹಡಗಿನಲ್ಲಿ ಹಲವು ರಂಧ್ರಗಳಿವೆ. ಒಂದನ್ನು ಮುಚ್ಚಲು ಯತ್ನಿಸಿದಾಗ ಮತ್ತೊಂದರಲ್ಲಿ ನೀರು ಹರಿದುಬರುತ್ತಿದೆ. ನಾವು ಒಟ್ಟಾಗಿ ಪರಿಶ್ರಮ ಪಡಬೇಕಾಗಿದೆ’ ಎಂದು ಆರ್‌ಸಿಬಿ ವಿರುದ್ಧದ 37 ರನ್ ಸೋಲಿನ ಬಳಿಕ ಚೆನ್ನೈ ತಂಡದ ನಿರ್ವಹಣೆಯನ್ನು ವಿಶ್ಲೇಷಿಸಿದ್ದಾರೆ.

ಶನಿವಾರ ಆರ್‌ಸಿಬಿ ತಂಡದ 170 ರನ್ ಸವಾಲಿಗೆ ಪ್ರತಿಯಾಗಿ ಸಿಎಸ್‌ಕೆ ತಂಡ 8 ವಿಕೆಟ್‌ಗೆ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕರಾದ ಶೇನ್ ವ್ಯಾಟ್ಸನ್ (14) ಮತ್ತು ಫಾಫ್​ ಡು ಪ್ಲೆಸಿಸ್ (8) ವಿಕೆಟ್‌ಗಳನ್ನು ಬೇಗನೆ ಕಬಳಿಸುವ ಮೂಲಕ ತಮಿಳುನಾಡು ಸ್ಪಿನ್ನರ್ ವಾಷಿಂಗ್ಟನ್ ಸುಂದರ್ (16ಕ್ಕೆ 2) ತವರು ರಾಜ್ಯದ ತಂಡಕ್ಕೆ ಆಘಾತ ನೀಡಿದರು. ಬಳಿಕ ಅಂಬಟಿ ರಾಯುಡು (42) ಮತ್ತು ಕೇದಾರ್ ಜಾಧವ್ ಸ್ಥಾನದಲ್ಲಿ ಆಡಿದ ಎನ್. ಜಗದೀಶನ್ (33) 3ನೇ ವಿಕೆಟ್‌ಗೆ 64 ರನ್ ಸೇರಿಸಿ ಸಿಎಸ್‌ಕೆ ತಂಡವನ್ನು ಗೆಲುವಿನ ಹಾದಿಗೆ ತರಲು ಯತ್ನಿಸಿದರು. ಕ್ರಿಸ್ ಮಾರಿಸ್ ಚುರುಕಿನ ಫೀಲ್ಡಿಂಗ್‌ನೊಂದಿಗೆ ಜಗದೀಶನ್‌ರನ್ನು ರನೌಟ್ ಮಾಡಿದ ಬಳಿಕ ಸಿಎಸ್‌ಕೆ ಕುಸಿತ ಕಂಡಿತು. ಧೋನಿ (10) ಚಾಹಲ್ ಎಸೆತದಲ್ಲಿ ಔಟ್ ಆಗುತ್ತಿದ್ದಂತೆ ಸಿಎಸ್‌ಕೆ ತಂಡ 20 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡು ತತ್ತರಿಸಿತು. ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ (7), ಡ್ವೆನ್ ಬ್ರಾವೊ (7) ಕೂಡ ವೈಫಲ್ಯ ಕಂಡರು. ಸ್ಲಾಗ್ ಓವರ್‌ಗಳಲ್ಲಿ ಕ್ರಿಸ್ ಮಾರಿಸ್ (19ಕ್ಕೆ 3) ಕಡಿವಾಣ ಹಾಕಿದರು.

‘ಉತ್ತಮ ಫಲಿತಾಂಶ ಸಿಗಬೇಕಾದರೆ ಎಲ್ಲರೂ ಶ್ರಮಿಸಬೇಕು. ಬ್ಯಾಟಿಂಗ್ ವಿಭಾಗದ ಬಗ್ಗೆ ಹೆಚ್ಚು ಕಳವಳವಿದೆ. ನಾವು ಆರಂಭದಿಂದಲೇ ದೊಡ್ಡ ಹೊಡೆತಕ್ಕೆ ಇಳಿಯಬೇಕಾಗಿದೆ. 15-16ನೇ ಓವರ್ ಬಳಿಕ ಹೆಚ್ಚಿನ ಸರಾಸರಿಯಲ್ಲಿ ರನ್ ಗಳಿಸಬೇಕಾದಾಗ ಕೆಳ ಕ್ರಮಾಂಕದ ಮೇಲೆ ಒತ್ತಡ ಹೆಚ್ಚಾಗುತ್ತಿದೆ’ ಎಂದು ಧೋನಿ ವಿವರಿಸಿದ್ದಾರೆ. ಸಿಎಸ್‌ಕೆ ತಂಡ ಈ ಮುನ್ನ ಕೆಕೆಆರ್ ತಂಡದ 167 ರನ್ ಸವಾಲನ್ನು ಬೆನ್ನಟ್ಟುತ್ತಿದ್ದಾಗಲೂ ಕೇವಲ 10 ರನ್‌ನಿಂದ ಸೋಲು ಕಂಡಿತ್ತು.

ಆರ್‌ಸಿಬಿ ತಂಡ ಕೊನೇ 4 ಓವರ್‌ಗಳಲ್ಲಿ 66 ರನ್ ದೋಚಿತು. ಹೀಗಾಗಿ ಬೌಲರ್‌ಗಳು ಕೂಡ ಡೆತ್ ಓವರ್‌ನಲ್ಲಿ ಉತ್ತಮ ನಿರ್ವಹಣೆ ತೋರಬೇಕಾಗಿದೆ. ಮೊದಲ 6 ಅಥವಾ ಕೊನೇ 4 ಓವರ್‌ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಡಲಾಗುತ್ತಿದೆ ಎಂದು ಧೋನಿ ಬೇಸರಿಸಿದರು.

‘ಇದು ನಮ್ಮ ತಂಡದ ಅತ್ಯಂತ ಪರಿಪೂರ್ಣ ನಿರ್ವಹಣೆ. ಮೊದಲಾರ್ಧದಲ್ಲಿ ನಾವು ಕೆಲ ಸಂಕಷ್ಟದ ಸಮಯ ಎದುರಿಸಿದ್ದೆವು. ಅದರ ಬಳಿಕ ಪುಟಿದೆದ್ದೆವು. 140-150 ರನ್ ಕೂಡ ಉತ್ತಮ ಮೊತ್ತವೆನಿಸುತ್ತಿತ್ತು. ಕೊನೆಗೆ ಅದಕ್ಕಿಂತಲೂ ಉತ್ತಮ ಮೊತ್ತ ಪೇರಿಸುವಲ್ಲಿ ಸಲರಾದೆವು’ ಎಂದು ಆರ್‌ಸಿಬಿ ನಾಯಕ ಹಾಗೂ ಪಂದ್ಯಶ್ರೇಷ್ಠ ವಿರಾಟ್ ಕೊಹ್ಲಿ ಹೇಳಿದರು.

ರನ್ ಅಂತರದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿಗೆ ಇದು ಅತಿ ದೊಡ್ಡ ಗೆಲುವಾಗಿದೆ. ಈ ಮುನ್ನ 2010ರಲ್ಲಿ 36 ರನ್‌ಗಳಿಂದ ಜಯಿಸಿದ್ದು ದೊಡ್ಡ ಗೆಲುವಾಗಿತ್ತು. ಎಬಿ ಡಿವಿಲಿಯರ್ಸ್‌ ಐಪಿಎಲ್‌ನಲ್ಲಿ 9ನೇ ಮತ್ತು 2016ರ ಬಳಿಕ ಮೊದಲ ಬಾರಿ ಶೂನ್ಯ ಸುತ್ತಿದರು.