ನವದೆಹಲಿ: ವಿನೇಶ್ ಫೋಗಟ್ ಅನರ್ಹತೆ ಕುರಿತು ಮರುಪರಿಶೀಲಿಸುವಂತೆ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯೂಡಬ್ಲ್ಯೂ ಡಬ್ಲ್ಯೂ)ಗೆ ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ(ಡಬ್ಲ್ಯೂಎಫ್ಐ)ನಿಂದ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ತಿಳಿಸಿದ್ದಾರೆ.
ಪ್ಯಾರಿಸ್ನ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿರುವ ಪಾಲಿಕ್ಲಿನಿಕ್‌ನಲ್ಲಿ ವಿನೇಶ್ ಅವರನ್ನು ಭೇಟಿಯಾಗಿದ್ದ ಐಒಎ ಅಧ್ಯಕ್ಷೆ ಪಿಟಿ ಉಷಾ, ವಿನೇಶ್ ಅವರ ಅನರ್ಹತೆ ಆಘಾತಕಾರಿಯಾಗಿದೆ. ಭಾರತೀಯ ಒಲಿಂಪಿಕ್ ಸಂಸ್ಥೆ, ಭಾರತ ಸರ್ಕಾರ ಮತ್ತು ಇಡೀ ದೇಶ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರಿಗೆ ಭರವಸೆ ನೀಡಿದ್ದೇನೆ ಎಂದಿದ್ದಾರೆ.
ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಗಿದೆ. ಇದರಿಂದಾಗಿ ಭಾರತದ ಮೊದಲ ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲುವ ಕನಸು ಕೂಡ ಭಗ್ನಗೊಂಡಿದೆ. ವಿನೇಶ್ ಫೋಗಟ್ ಕೇವಲ 100 ಗ್ರಾಂ ತೂಕ ಹೆಚ್ಚಿದ್ದರಿಂದ ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಗಿದೆ. ಈ ನಡುವೆ ಅವರು ನಿರ್ಜಲೀಕರಣದಿಂದಾಗಿ ಬಳಲುತ್ತಿದ್ದು, ನಾವು ವಿನೇಶ್‌ಗೆ ಎಲ್ಲಾ ರೀತಿಯ ವೈದ್ಯಕೀಯ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡುತ್ತಿದ್ದೇವೆ’ ಎಂದು ಹೇಳಿದ್ದಾರೆ.
ವಿನೇಶ್ ಅನರ್ಹತೆಯ ವಿರುದ್ಧ ಭಾರತೀಯ ಒಲಿಂಪಿಕ್ ಸಂಸ್ಥೆ ನಿರಂತರವಾಗಿ ಧ್ವನಿ ಎತ್ತುತ್ತಿದೆ. ಡಬ್ಲ್ಯುಎಫ್‌ಐ ಕೂಡ ಒಲಿಂಪಿಕ್ ಸಮಿತಿಗೆ ಪತ್ರ ಬರೆದು ವಿನೇಶ್ ಅವರನ್ನು ಹೊರಗಿಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆ ಎಂದಿದ್ದಾರೆ. ಇದರ ಜೊತೆಗೆ ವಿನೇಶ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಇವರು, ‘ವಿನೇಶ್ ಅವರ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಸದ್ಯ ಆಕೆ ಆರೋಗ್ಯವಾಗಿದ್ದಾರೆ. ದೈಹಿಕವಾಗಿ ಚೆನ್ನಾಗಿದ್ದಾರೆ ಆದರೆ ಮಾನಸಿಕವಾಗಿ ಅವರು ತುಂಬಾ ಕುಗ್ಗಿದ್ದಾರೆ ಎಂದು ಹೇಳಿದ್ದಾರೆ.
ತೂಕ ಹೆಚ್ಚಳದ ಬಗ್ಗೆ ಮಾಹಿತಿ ನೀಡಿರುವ ವೈದ್ಯ ಪರ್ದಿವಾಲಾ, ‘ಕೆಲವೊಮ್ಮೆ ನಿರಂತರ ಪಂದ್ಯಗಳಿಂದ ಹೆಚ್ಚು ನೀರು ಕುಡಿಯಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ತೂಕ ಹೆಚ್ಚಾಗುತ್ತದೆ. ರಾತ್ರಿ ವಿನೇಶ್‌ನ ತೂಕ ಹೆಚ್ಚಾದಾಗ ಅದನ್ನು ಕಡಿಮೆ ಮಾಡಲು ವೈದ್ಯಕೀಯ ತಂಡ ಅನೇಕ ಪ್ರಯತ್ನ ಮಾಡಿತು, ಅವರ ಕೂದಲನ್ನು ಸಹ ಕತ್ತರಿಸಲಾಯಿತು. ಆದರೆ ಬೆಳಗ್ಗೆ 7 ಗಂಟೆಗೆ ಅವರನ್ನು ತೂಕ ಮಾಡಿದಾಗ, ಅವರು ನಿಗದಿಗಿಂತ 100 ಗ್ರಾಂ ಹೆಚ್ಚು ತೂಕ ಇರುವುದು ಕಂಡುಬಂದಿತ್ತು ಎಂದಿದ್ದಾರೆ.