ಕ್ರೀಡೆ

ಮುಂಬೈ ಇಂಡಿಯನ್ಸ್ ತಂಡದ ಜಾಕೆಟ್ ತೊಟ್ಟು ಪಾಕ್‌ಗೆ ತೆರಳಿದ ವಿಂಡೀಸ್ ಕ್ರಿಕೆಟಿಗ, ಟ್ರೋಲ್ ಆದ ಪಿಎಸ್‌ಎಲ್ ತಂಡ

ಲಾಹೋರ್: ಕರೊನಾ ವೈರಸ್ ಅಬ್ಬರದ ನಡುವೆಯೂ ಜಿಂಬಾಬ್ವೆ ವಿರುದ್ಧದ ನಿಗದಿತ ಓವರ್‌ಗಳನ್ನು ಆಯೋಜಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಪಿಎಸ್‌ಎಲ್‌ನ ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲು ಸಿದ್ಧವಾಗುತ್ತಿದೆ. ಇದಕ್ಕಾಗಿ ವಿದೇಶಿ ಆಟಗಾರರೂ ಕೂಡ ಆಗಮಿಸುತ್ತಿದ್ದಾರೆ. ಆದರೆ, ಆಟಗಾರರನ್ನು ಸ್ವಾಗತಿಸುವ ಬರದಲ್ಲಿ ಪಿಎಸ್‌ಎಲ್ ಫ್ರಾಂಚೈಸಿ ಕರಾಚಿ ಕಿಂಗ್ಸ್ (ಕೆಕೆ) ಎಡವಟ್ಟು ಮಾಡಿಕೊಂಡಿದೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ವೆಸ್ಟ್ ಇಂಡೀಸ್‌ನ ಶೆಫಾನೆ ರುಧರ್ ಫೋರ್ಡ್ ಫೋಟೋ ಪ್ರಕಟಿಸಿದ್ದೇ ತಡ, ಕರಾಚಿ ತಂಡ ಭಾರಿ ಟ್ರೋಲ್‌ಗೆ ಒಳಗಾಗಿದೆ.

ಮುಂಬೈ ಇಂಡಿಯನ್ಸ್ ತಂಡದ ಜಾಕೆಟ್ ತೊಟ್ಟು, ರುಧರ್ ಫೋರ್ಡ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಜೆರ್ಸಿ ಗಮನಿಸದೆ ಕರಾಚಿ ತಂಡ ಸ್ವಾಗತ ಎಂದು ಅವರ ಫೋಟೋ ಪ್ರಕಟಿಸಿದೆ. ಇದನ್ನು ಗಮನಿಸಿದ ನೆಟ್ಟಿಗರು, ಆಟಗಾರರಿಗೆ ಕನಿಷ್ಠ ಪಕ್ಷ ಜೆರ್ಸಿಯನ್ನಾದರೂ ಕೊಡಿ, ಮುಂಬೈ ಜೆರ್ಸಿ ತೊಟ್ಟು ಪಿಎಸ್‌ಎಲ್‌ನಲ್ಲಿ ಆಟವೇ ಎಂದೆಲ್ಲಾ ಕಾಲೆಳೆದಿದ್ದಾರೆ.

ರುಧರ್ ಫೋರ್ಡ್ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೂ 16 ಪಂದ್ಯಗಳಲ್ಲೂ ಬೆಂಚು ಕಾಯಿಸಿದ್ದರು. ಇಶಾನ್ ಕಿಶನ್, ಕೈರಾನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್‌ನಲ್ಲಿದ್ದ ಕಾರಣ ರುಧರ್ ಫೋರ್ಡ್‌ಗೆ ಅವಕಾಶ ದಕ್ಕಲಿಲ್ಲ. ಕರಾಚಿಯಲ್ಲಿ ಪಿಎಸ್‌ಎಲ್ ಪ್ಲೇಆಫ್ ನಡೆಯಲಿದ್ದು, ನವೆಂಬರ್ 17 ರಂದು ಫೈನಲ್ ನಿಗದಿಯಾಗಿದೆ.